

ಕಡೂರು: ಯುವ ಜನರು ಜಾನಪದ ಸಂಸ್ಕೃತಿ, ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಗಡಿಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ಎಸ್.ತಿಮ್ಮಯ್ಯ ಹೇಳಿದರು.
ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿ ಫೆ.10ರಂದು ನಡೆಯಲಿರುವ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಗುರುವಾರ ಬಿಡುಗಡೆಗೊಳಿಸಿ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿ ದಾಳಿಗೆ ಸಿಲುಕಿ ನಲುಗುತ್ತಿರುವ ಜಾನಪದ ಕಲೆ, ಸಂಸ್ಕೃತಿಯನ್ನು ಕಾಪಾಡಲು ಜಾನಪದ ಪರಿಷತ್ತಿನ ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ಸಂಗತಿ ಎಂದರು.
ಗಡಿಹಳ್ಳಿಯಲ್ಲಿ ನಡೆಯಲಿರುವ ಜಾನಪದ ಸಮ್ಮೇಳನದಲ್ಲಿ ಜಿಲ್ಲಾದ್ಯಂತ ಎಲ್ಲ ಜಾನಪದ ಕಲಾವಿದರು, ಕಲಾಪೋಷಕರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದು, ಈ ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಹಿರಿಯ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ.ಬಿ.ಸುರೇಶ್ ಮಾತನಾಡಿ, ಜಾನಪದವೆಂದರೆ ಬರಿ ಹಾಡಲ್ಲ. 200ಕ್ಕೂ ಹೆಚ್ಚು ಕಲೆಗಳನ್ನು ಒಳಗೊಂಡ ದೊಡ್ಡ ಕಲಾ ಗ್ರಂಥ ಭಂಡಾರವಾಗಿದೆ. ಸ್ವಾಸ್ಥ್ಯಸಮಾಜ ನಿರ್ಮಾಣ ಮಾಡುವ ಸಾಹಿತ್ಯ ಸಂಸ್ಕೃತಿ ಇದರಲ್ಲಿ ಅಡಗಿದೆ. ಇದನ್ನು ಯುವ ಜನತೆ ಹೆಚ್ಚು ಪ್ರೋತ್ಸಾಹಿಸಿದ್ದಲ್ಲಿ ಸತ್ಯ, ಅಹಿಂಸೆ, ಪ್ರಾಮಾಣಿಕ ಮಾದರಿ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಮುಂದಿನ ದಿನಗಳಲ್ಲಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾನಪದ ಪರಿಷತ್ ಸಮ್ಮೇಳನ ನಡೆಸಲಾಗುವುದು ಎಂದರು.
ಗ್ರಾಮ ಅಭಿವೃದ್ಧಿ ಸಮಿತಿ ಸದಸ್ಯ ಜಿ.ಎಲ್.ಮಂಜುನಾಥ ಮಾತನಾಡಿ, ಸಮ್ಮೇಳನ ದಿನ ಸರ್ವಾಧ್ಯಕ್ಷ ನಿಂಗಪ್ಪ ಅವರನ್ನು ಗಡಿಹಳ್ಳಿಯ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳು ಮತ್ತು ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಗುವುದು. ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜಾನಪದ ಕಲಾತಂಡಗಳಾದ ಚಿಟ್ಟಿಮೇಳ, ಸೋಮನ ಕುಣಿತ, ಅಸಾದಿ ಕುಣಿತ, ನಂದಿ ಧ್ವಜ ಕುಣಿತ, ಹಳ್ಳಿ ವಾದ್ಯ ಸುಗ್ಗಿ ಕುಣಿತ, ಕಂಸಾಳೆ ಮುಂತಾದ ಕಲಾತಂಡಗಳು ಭಾಗವಹಿಸಲಿವೆ. ಜನಪದ ನಾಟಕಗಳು,ನೃತ್ಯಗಳು, ಕೋಲಾಟ, ಜಾನಪದ ಗೀತೆ ಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ ಅಜ್ಜಂಪುರ ತಾಲೂಕು ಅಧ್ಯಕ್ಷ ಡಾ. ಮಾಳೇನಳ್ಳಿ ಬಸಪ್ಪ, ಗೌರವಾಧ್ಯಕ್ಷ ಮರುಳಸಿದ್ದಪ್ಪ, ಜಿಲ್ಲಾ ಉಪಾಧ್ಯಕ್ಷ ಜಿ.ತಿಪ್ಪೇಶ, ಮುಗಳಿ ಲಕ್ಷ್ಮೀ ದೇವಮ್ಮ, ಪರಮೇಶ್ವರಪ್ಪ, ಚಿಕ್ಕನಲೂರು ಜಯಣ್ಣ ಅಣ್ಣಯ್ಯ, ತ್ಯಾಗದ ಕಟ್ಟೆ ಪ್ರಕಾಶ ರಾಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಗೋವಿಂದಪ್ಪ, ಸಮ್ಮೇಳನ ಅಧ್ಯಕ್ಷ ಇ.ಓಂಕಾರಮೂರ್ತಿ, ಉಪಾಧ್ಯಕ್ಷ ತಿಪ್ಪೇಶ, ಚಿಕ್ಕಲ್ಲೂರು ಜಯಣ್ಣ, ಹೋಬಳಿ ಅಧ್ಯಕ್ಷರಾದ ಪರಮೇಶಣ್ಣ, ನಂದೀಶ್ ಬಾಬು, ಕೀರ್ತಿಕುಮಾರ್, ಮಲಿಯಪ್ಪ ಇತರರಿದ್ದರು.