ಯುವ ಜನರೇ ದೃಢಸಂಕಲ್ಪದೊಂದಿಗೆ ರಾಜಕಾರಣಕ್ಕೆ ಬನ್ನಿ, ನಿಖಿಲ್ ಕುಮಾರಸ್ವಾಮಿ ಕರೆ

9cbp2.jpg
Published on


ಚಿಕ್ಕಬಳ್ಳಾಪುರ: ಜನರ ಸಮಸ್ಯೆಗಳ ಪ್ರಾಮಾಣಿಕ ಪರಿಹಾರಕ್ಕೆ ಯುವ ಜನರು ಹೆಚ್ಚಿನ ಪ್ರಮಾಣದಲ್ಲಿ ದೃಢಸಂಕಲ್ಪದೊಂದಿಗೆ ರಾಜಕಾರಣಕ್ಕೆ ಬರಬೇಕು ಎಂದು ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಶ್ರೀದೇವಿ ಪ್ಯಾಲೇಸ್‌ ನಲ್ಲಿ ಜೆಡಿಎಸ್‌ ಕೈಗೊಂಡಿದ್ದ ಜನರೊಂದಿಗೆ ಜನತಾ ದಳ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಪ್ರಾಮಾಣಿಕ ಪರಿಶ್ರಮದಿಂದ ರಾಜ್ಯದಲ್ಲಿ ಜೆಡಿಎಸ್‌ ಹಾಗೂ ಮೈತ್ರಿ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಇದರ ಯಶಸ್ಸನ್ನು ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲೂ ಕಾಣಬೇಕು. ರಾಜ್ಯದ ಶ್ರೇಯೋಭಿವೃದ್ಧಿಗೆ ಮತ್ತೊಮ್ಮೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಅಧಿಕಾರವನ್ನು ಅನುಭವಿಸಿ ಪಕ್ಷಕ್ಕೆ ಕೈ ಕೊಡುವ, ಬೆನ್ನಿಗೆ ಛೂರಿ ಹಾಕಿ ಹೋಗುವವರಿಂದ ಏನು ನಷ್ಟವಿಲ್ಲ. ಪ್ರಾಮಾಣಿಕ ಕಾರ್ಯಕರ್ತರ ಬಲವು ನಿರಂತರವಾಗಿ ಇರುತ್ತದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಶಾಸಕ ಬಿ.ಎನ್‌.ರವಿಕುಮಾರ್‌ ಮಾತನಾಡಿ, ಮುಂಬರುವ ಜಿ.ಪಂ, ತಾ.ಪಂ.ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ಬೂತ್‌ ಮಟ್ಟದಲ್ಲಿ ಸಂಘಟಿಸುವ ನಿಟ್ಟಿನಲ್ಲಿ ಉತ್ತೇಜನಕಾರಿ ಜನರೊಂದಿಗೆ ಜನತಾ ದಳ ಕಾರ್ಯಕ್ರಮ. ಸಾಮಾನ್ಯ ರೈತನಿಗೆ ಶಾಸಕನಾಗಿ ಅವಕಾಶ ಕೊಟ್ಟ ಪಕ್ಷ ಜೆಡಿಎಸ್‌. ನೀರಾವರಿ ಯೋಜನೆ, ಕೃಷಿ ಸೇರಿದಂತೆ ಮಹತ್ತರವಾದ ಕೊಡುಗೆಗಳ ಮೂಲಕ ಪ್ರಾದೇಶಿಕವಾಗಿ ಬಲವರ್ಧನೆಯೊಂದಿಗೆ ರಾಜ್ಯದ ಹಿತವನ್ನು ಕಾಪಾಡುತ್ತಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎ.ಮಂಜು, ವಿಧಾನಪರಿಷತ್‌ ಮಾಜಿ ಸದಸ್ಯ ಎ.ಚೌಡರೆಡ್ಡಿ, ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಡಾ ರೋಷನ್‌ ಅಬ್ಬಾಸ್, ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಮುಖಂಡರಾದ ಕೆ.ಆರ್‌.ರೆಡ್ಡಿ, ಪ್ರಭಾ ನಾರಾಯಣಗೌಡ, ಸುಮಾ, ಅರುಣ, ವೆಂಕಟರಮಣ, ನಾರಾಯಣಸ್ವಾಮಿ, ಕಿಸಾನ್‌ ಕೃಷ್ಣಪ್ಪ ಮತ್ತಿತರರು ಇದ್ದರು.

*ಕೇಂದ್ರಕ್ಕೆ ಮೋದಿ, ಕರ್ನಾಟಕಕ್ಕೆ ಎಚ್ ಡಿಕೆ
ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಕು, ಹಾಗೆಯೇ ಕರ್ನಾಟಕಕ್ಕೆ ಎಚ್.ಡಿ.ಕುಮಾರಸ್ವಾಮಿ ಬೇಕು. ಭಾರತವು ಹಲವು ಕ್ಷೇತ್ರಗಳಲ್ಲಿ ಜಾಗತಿಕವಾಗಿ ಗಮನ ಸೆಳೆಯುವಲ್ಲಿ ಮೋದಿ ಅಭಿವೃದ್ಧಿ ಯೋಜನೆಗಳು ಮಹತ್ತರವಾದುದು. ಅದೇ ಕರ್ನಾಟಕದಲ್ಲಿ ನಾಡು ನುಡಿ, ನೆಲ ಜಲ ಪ್ರಾದೇಶಿಕ ಅಭಿವೃದ್ಧಿಗೆ ಕುಮಾರಸ್ವಾಮಿಯವರ ಅಗತ್ಯವಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net