

ಹುಣಸೂರು: ತಂಬಾಕು ಸೇವನೆಯ ದುಶ್ಚಟಕ್ಕೆ ಯುವಜನತೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ವಿಷಾದಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಮತ್ತು ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕುರಿತು ಅರಿವು- ನೆರವು ಕಾರ್ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದಾದ್ಯಂತ ಪ್ರತಿ ವರ್ಷ 80 ಲಕ್ಷ ಮಂದಿ ತಂಬಾಕು ಸೇವನೆಯ ದುಷ್ಪರಿಣಾಮದಿಂದ ಮೃತರಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಶೇ.65ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವ ಯುವಸಮೂಹದ ಪೈಕಿ ಶೇ.39 ಮಂದಿ ತಂಬಾಕು ಮತ್ತು ಅದರ ಉತ್ಪನ್ನಗಳು, ಮಾದಕ ವಸ್ತುಗಳ ದಾಸ್ಯಕ್ಕೆ ಬಲಿಯಾಗುತ್ತಿದ್ದಾರೆ. ಸಂತೋಷ ಸಿಗುತ್ತದೆ ಎನ್ನುವ ಮೂಢನಂಬಿಕೆಗೆ ಅವರು ಒಳಗಾಗಿದ್ದಾರೆ. ಆದರೆ ಒಂದು ಸಿಗರೇಟ್ ಸೇವನೆ ವ್ಯಕ್ತಿಯ ಆಯಸ್ಸನ್ನು 3ನಿಮಿಷಕ್ಕೆ ಕಡಿತಗೊಳಿಸುತ್ತದೆ ಎನ್ನುವುದನ್ನು ಯುವಜನರು ಮರೆಯಬಾರದು. ಸುಖ- ದುಃಖಗಳನ್ನು ಸಮನಾಗಿ ಸ್ವೀಕರಿಸುವ ಮನೋಬಲ ನಿಮ್ಮಲ್ಲಿರಲಿ. ತಂಬಾಕು ನೀವು ತಿಂದರೆ, ತಂಬಾಕು ನಿಮ್ಮ ಜೀವವನ್ನೇ ತಿನ್ನುತ್ತದೆ ಎನ್ನುವುದು ನಿಮಗೆ ತಿಳಿದಿರಲಿ. ಈ ಕುರಿತು ವಿವಿಧ ಸರ್ಕಾರಿ ಸಂಘ-ಸಂಸ್ಥೆಗಳ ಮೂಲಕ ಅರಿವು ಮೂಡಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವೆಂದರು.
ಸಂಚಾರಿ ಗಿರಿಜನ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ಸೌಮ್ಯಶ್ರೀ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ಒದಗಿಸಿದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವಕುಮಾರ್ ಮಾತನಾಡಿದರು. ಪ್ರಾಂಶುಪಾಲೆ ಡಾ.ಕವಿತಾ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಶಿವಣ್ಣೇಗೌಡ, ಕಾರ್ಯದರ್ಶಿ ಎಚ್.ಜಿ.ಸಂದೀಪ್, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.