

ವಿಜಯಪುರ: ಯುವಜನತೆಯಲ್ಲಿ ಕ್ರೀಡೆಗಳ ಮೇಲಿನ ಪ್ರೀತಿ ಕ್ಷೀಣಿಸುತ್ತಿದೆ. ದೈಹಿಕ ಸದೃಢ ತರುವ ಆಟೋಟಗಳಿಂದ ವಿಮುಕ್ತಿಗೊಳ್ಳುತ್ತಲಿದ್ದಾರೆ. ಕೇವಲ ಮೊಬೈಲ್ ಗೇಮ್ ಹಿಡಿದು ಒಂಟಿತನದತ್ತ ಜಾರುತ್ತಿದ್ದಾರೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ವಿಷಾದಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದೇವರಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆತಿಥ್ಯದಲ್ಲಿ ಹಮ್ಮಿಕೊಂಡಿರುವ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 8ನೇ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಒಂಟಿತನ ಕಳೆಯಲು ಮಾದಕ ವ್ಯಸನದತ್ತ ಯುವ ಜನತೆ ವಾಲುತ್ತಿದ್ದಾರೆ. ಇದರಿಂದ ಜೀವನದಲ್ಲಿ ಸಂಕಷ್ಟ ಅನುಭವಿಸುವಂತಾಗುತ್ತದೆ. ತನ್ನತನದ ಹೊಣೆಗಾರಿಕೆಯಿಂದ ದೂರ ಸರಿಯುತ್ತಿದ್ದಾರೆ ಎಂದರು.
ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ವಿಜಯ ನಾಗಣ್ಣವರ ಮಾತನಾಡಿ, ಕ್ರೀಡೆಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುತ್ತವೆ. ಆರೋಗ್ಯಕರ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕುಲಸಚಿವೆ ರಾಜಶ್ರೀ ಜೈನಾಪುರ, ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ಶಿವಾನಂದ ಗೊರನಾಳೆ, ಹಣಕಾಸು ಅಧಿಕಾರಿ ಪ್ರೊ.ಆಕಾಶ ಎಸ್.ಬಿ., ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಬಸವರಾಜ ಪದ್ಮಶಾಲಿ , ಕ್ರೀಡಾ ನಿರ್ದೇಶಕ ಡಾ. ಜಗದೀಶ ಗಸ್ತಿ ಇತರರು ಇದ್ದರು.