

ಕಾರವಾರ: ಇತ್ತಿಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವ ಜನತೆ ದುಶ್ಚಟಗಳು ಹಾಗೂ ದುರ್ವ್ಯಸನಗಳಿಗೆ ಒಳಗಾಗಿ ಮಾನಸಿಕ ಖಿನ್ನತೆಯಿಂದ ತಮ್ಮ ಪೂರ್ತಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದು, ಆರೋಗ್ಯವಂತ ಸಮಾಜಕ್ಕೆ ಇದು ಮಾರಕವಾಗಿದೆ. ಯುವ ಜನತೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು, ವಿದ್ಯಾರ್ಥಿ ಜೀವನದಿಂದಲೇ ದುಶ್ಚಟಗಳಿಂದ ದೂರವಿರುತ್ತೇವೆ ಎಂದು ದೃಢ ನಿರ್ಧಾರ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ
ಹೇಳಿದರು.
ಅವರು ಶುಕ್ರವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶ್ರೀ.ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನದ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಶ್ರೀ.ಡಾ.ಮಹಾಂತ ಶಿವಯೋಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಯುವ ಜನತೆ ಸೋಷಿಯಲ್ ಮೀಡಿಯಾಗಳ ಬಳಕೆಯ ಒಬ್ಬಂಟಿತನದಿಂದ ಹೊರಬಂದು, ಸಮಾಜಮುಖಿಯಾಗಿ, ಜನರೊಂದಿಗೆ ಬೇರೆಯಬೇಕು, ಕುಟುಂಬದ ಜೊತೆ ಸಮಯ ಕಳೆಯಬೇಕು. ಸಮಾಜದಲ್ಲಿನ ಸಂತೋಷ ಕ್ಷಣಗಳನ್ನು ಅನುಭವಿಸುವ ಮೂಲಕ ದುಶ್ಚಟಗಳಿಂದ ದೂರವಿರಬೇಕು. ಕೆಟ್ಟ ಮೇಲೆ ಬುದ್ದಿ ಕಲಿಯುವದಕ್ಕಿಂತ ಕೆಟ್ಟ ಚಟಗಳಿಂದ ಮೊದಲು ದೂರವಿರಬೇಕು. ಯುವ ಜನತೆಯ ಮೇಲೆ ಬಹಳಷ್ಟು ಜವಾಬ್ದಾರಿ ಇದ್ದು, ಇದನ್ನು ಅರಿತು, ತಮ್ಮ ಜೀವನ ರೂಪಿಸಿಕೊಳ್ಳುವ ಕಡೆ ಗಮನ ನೀಡಬೇಕು ಎಂದರು.
ದುರ್ವ್ಯಸನಗಳು, ದುಶ್ಚಟಗಳು ಹಾಗೂ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಶ್ರೀ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ . ದುಶ್ಚಟಗಳಿಗೆ ಒಳಗಾಗಿರುವ ಮನ ಪರಿರ್ವತಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಹಳ್ಳಿ ಹಳ್ಳಿಗೆ ತರೆಳಿ ಜನರಲ್ಲಿ ಜಾಗೃತಿ ಮೂಡಿಸಿ, ತಮ್ಮ ಜೋಳಿಗೆಯಲ್ಲಿ ಧವಸ ಧಾನ್ಯ ಪಡೆಯದೇ , ಜನರು ತಮ್ಮಲ್ಲಿರುವ ದುಶ್ಚಟಗಳನ್ನು ಜೋಳಿಗೆಗೆ ನೀಡಿ ಎಂದು ಹೇಳುವ ಮೂಲಕ ಜನರ ಮನಸ್ಸನ್ನು ಪರಿವರ್ತಿಸುವ ಜೋಳಿಗೆ ಆಂದೋಲನ ಮಾಡಿದ ಮಹಾನ್ ಶಿವಯೋಗಿಗಳು ಎಂದರು.
ವಿಶೇಷ ಉಪನ್ಯಾಸ ನೀಡಿದ, ಕ್ರಿಮ್ಸ್ ಮನೋ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಅಕ್ಷಯ ಪಾಟಕ್ , ವ್ಯಸನವು ಕೇವಲ ದೈಹಿಕವಾದ ಚಟವಲ್ಲ ಅದು ಮೆದುಳಿನ ಖಾಯಿಲೆಯಾಗಿದೆ. ಯುವ ಜನತೆ ದುಶ್ಚಟವೆಂಬ ಮಾಯಾವಿ ಖಾಯಿಲೆಗೆ ಬೇಗ ಸೆಳೆಯಲ್ಪಡುತ್ತಾರೆ. ಈ ಜಾಲದಲ್ಲಿ ಬಂಧಿಯಾದ ನಂತರ ಅದು ಅವರ ಮೇಲೆ ತನ್ನ ಹಿಡಿತವನ್ನು ಸಾಧಿಸುತ್ತದೆ. ದುಶ್ಚಟಗಳು ವ್ಯಕ್ತಿಯ ವೈಯಕ್ತಿಕ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆಯು, ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೇ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ. ವಿದ್ಯಾರ್ಥಿಗಳು ಕುತೂಹಲ ಮತ್ತು ಮನರಂಜನೆಗೆ ಎಂದು ಪ್ರಾರಂಭಿಸುವ ದುಶ್ಚಟಗಳು ಮುಂದೆ ವ್ಯಸನವಾಗಿ ಮಾರ್ಪಾಡಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳ ವ್ಯಸನ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಹೆಚ್ಚಿನ
ಅರಿವು ಹೊಂ ದಿರಬೇಕು , ಆರಂಭದಲ್ಲಿ ಸ್ವರ್ಗದಂತೆ ತೋರುವ ಮಾದಕ ವಸ್ತುಗಳು ಅಂತಿಮವಾಗಿ ವ್ಯಸನಿಗಳನ್ನು ನರಕಕ್ಕೆ
ಕೊಂಡೊಯ್ಯುತ್ತವೆ ಎಂದರು.
ಕಾರವಾರ ನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ರವೀಂದ್ರ ಬಿರಾದರ ಮಾತನಾಡಿ ಯುವಕರು ಹೆಚ್ಚಾಗಿ ವ್ಯಸನಗಳಿಗೆ ಬಲಿಯಾಗುತ್ತಾರೆ. ಚಿಕ್ಕ ಚಿಕ್ಕ ಚಟಗಳು ವ್ಯಸನಗಳಾಗಿ ಮಾರ್ಪಾಡಾಗುತ್ತದೆ. ವಿದ್ಯಾರ್ಥಿಗಳು ಇಂತಹ ಚಟಗಳಿಂದ ದೂರವಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಶಾಲಾ ಕಾಲೇಜು ಪ್ರದೇಶದಲ್ಲಿ ಮಾದಕ ವಸ್ತು ಮಾರಾಟ ಮಾಡುವ ಬಗ್ಗೆ ಮಾಹಿತಿ ಇದ್ದರೆ ಶಿಕ್ಷಕರ ಗಮನಕ್ಕೆ ಅಥವಾ ಪೊಲೀಸ್ ಇಲಾಖೆಯ ಉಚಿತ ದೂರವಾಣಿ ಸಂಖ್ಯೆ 112 ಗೆ ಕರೆ ಮಾಡಿ ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಮಾರಾಟ ಮಾಡುವವರಿಗೆ 10 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸೇವನೆ ಮಾಡುವರಿಗೂ ಶಿಕ್ಷೆ ವಿಧಿಸಲಾಗುತ್ತದೆ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂ ಶುಪಾಲ ರಮೇಶ ಎಸ್ ಪತ್ರೆಕರ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸತೀಶ ನಾಯ್ಕ ಮಾದಕ ವಸ್ತು ವಿರೋಧಿ ಕುರಿತ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶಿವಕುಮಾರ್, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ದುಶ್ಚಟಗಳಿಗೆ ಒಳಗಾಗಿ ನಂತರ ವ್ಯಸನ ಮುಕ್ತರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸುತ್ತಿರುವ ವ್ಯಸನ ಮುಕ್ತರನ್ನು ಸನ್ಮಾನಿಸಲಾಯಿತು. ವನಿತಾ ಶೇಟ್ ನಿರೂಪಿಸಿದರು, ಉಪನ್ಯಾಸಕಿ ಪೂಜಾ ಸ್ವಾಗತಿಸಿ, ವಂದಿಸಿದರು.