

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಣಕಾಸಿನ ವಿಚಾರವಾಗಿ ನಗರದ ಹಾವೇರಿಪೇಟೆಯ ಕಂಠಿ ಗಲ್ಲಿಯಲ್ಲಿ ನಡೆದಿದ್ದ ಚಾಕು ಇರಿತ ಪ್ರಕರಣದಲ್ಲಿ ತೀವ್ರ ಗಾಯಗೊಂಡಿದ್ದ ರಾಘವೇಂದ್ರ ಗಾಯಕವಾಡ ಮಂಗಳವಾರ ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಖ್ವಾಜಾ ಶಿರಹಟ್ಟಿ ಎಂಬಾತ ರಾಘವೇಂದ್ರನ ಸಹೋದರ ಮಹಾಂತೇಶ ಎಂಬಾತನಿಗೆ ಸಾಲ ನೀಡಿದ್ದ. ಈ ವಿಷಯವಾಗಿ ಜು. 10ರಂದು ಮಹಾಂತೇಶನ ಮನೆಗೆ ಹೋಗಿದ್ದ ಖ್ವಾಜಾ, ಮನೆಯಲ್ಲಿದ್ದ ರಾಘವೇಂದ್ರನ ಜತೆ ಜಗಳವಾಡಿದ್ದ. ಚಾಕುವಿನಿಂದ ರಾಘವೇಂದ್ರನ ಬೆನ್ನಿಗೆ 6 ಬಾರಿ ಇರಿದಿದ್ದ. ಚಾಕುವಿನ ತುಣುಕು ರಾಘವೇಂದ್ರನ ಬೆನ್ನಿನಲ್ಲೇ ಮುರಿದಿತ್ತು. ಚಿಕಿತ್ಸೆಗಾಗಿ ರಾಘವೇಂದ್ರನನ್ನು ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾಘವೇಂದ್ರ ಮೃತಪಟ್ಟಿದ್ದಾನೆ.