ಕಾಸರಗೋಡು: ವಿದೇಶದಿಂದ ಕಳುಹಿಸಿಕೊಟ್ಟಿದ್ದ ಚಿನ್ನವನ್ನು ವಾರೀಸುದಾರರಿಗೆ ತಲುಪಿಸಿಲ್ಲವೆಂದು ಆರೋಪಿಸಿ, ಯುವಕನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೇಕಲ ಸನಿಹದ ಚಿತ್ತಾರಿ ನಿವಾಸಿ ಅಸ್ರಫ್ ಯಾನೆ ಅಚ್ಚು, ಸುಫಾರಿ ತಂಡದ ಸದಸ್ಯರೆನ್ನಲಾದ ಪಿ.ಕೆ.ಶಾಹಿರ್, ಇಬ್ರಾಹಿಂ ಖಲೀಲ್ ಹಾಗೂ ಪಿ.ಸಿ.ಯಾಸರ್ ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೇಕಲ ಪೂಚಕ್ಕಾಡ್ ರಸ್ತೆ ನಿವಾಸಿ ಎ.ಪಿ.ಅಬ್ದುಲ್ ಮಜೀದ್ ಎಂಬುವರ ದೂರಿನ ಮೇರೆಗೆ ಈ ಬಂಧನ ನಡೆದಿದೆ.
ದುಬೈಯಿಂದ ನೀಡಲಾಗಿದ್ದ ಚಿನ್ನವನ್ನು ಸಂಬಂಧಪಟ್ಟವರಿಗೆ ನೀಡಿಲ್ಲವೆಂದು ಆರೋಪಿಸಿ ಕಾರಿನಲ್ಲಿ ಆಗಮಿಸಿದ ತಂಡ ಪಡನ್ನದ ರೆಸಾರ್ಟ್ ಒಂದಕ್ಕೆ ಕರೆದೊಯ್ದು, ಚಿನ್ನ ವಾಪಾಸು ಮಾಡಬೇಕು ಅಥವಾ ಹಣ ನೀಡಬೇಕು. ಎರಡೂ ಸಾಧ್ಯವಾಗದಿದ್ದಲ್ಲಿ ಮನೆಯನ್ನು ತಮ್ಮ ಹೆಸರಿಗೆ ನೋಂದಾವಣಿ ಮಾಡಿಕೊಡಬೇಕು ಎಂದು ಹೇಳಿ ಹಲ್ಲೆ ನಡೆಸಿದೆ. ಈ ವೇಳೆ ಪೆರಾಂಬ್ರದ ಸ್ನೇಹಿತನಿಂದ ಹಣ ಪಡೆದು ನೀಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ, ಪೆರಾಂಬ್ರಕ್ಕೆ ಕರೆದೊಯ್ಯುವ ಹಾದಿ ಮಧ್ಯೆ ತಂಡದಿಂದ ತಪ್ಪಿಸಿ ಪೆರಾಂಬ್ರ ಪೊಲೀಸ್ ಠಾಣೆಗೆ ತೆರಳಿ ಆಶ್ರಯ ಪಡೆದಿದ್ದೆ ಎಂದು ಬೇಕಲ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಜೀದ್ ತಿಳಿಸಿದ್ದಾರೆ.