ಗೆಳೆಯನ ಸಾವಿಗೆ ನ್ಯಾಯ ಕೊಡಿ; ರಸ್ತೆ ಅಪಘಾತದಲ್ಲಿ ಮೃತಪಟ್ಟ ಆತಿಶ್‌ ಸ್ನೇಹಿತ ಲಿಖಿತ್ ಮೌನ ಪ್ರತಿಭಟನೆ

IMG-20220811-WA0023
Published on

ಮಂಗಳೂರು: ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಶುಕ್ರವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸ್ಕೂಟರ್ ಸವಾರ ಕೊಂಚಾಡಿ ನಿವಾಸಿ ಆತಿಶ್ (20)ನ ಸಾವಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿ, ಆತನ ಸ್ನೇಹಿತ ಲಿಖಿತ್ ರೈ ಗುರುವಾರ ಸಾಯಂಕಾಲ ಮಹಾನಗರ ಪಾಲಿಕೆ ಎದುರು ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿದರು.
ಆತಿಶ್ ಕಳೆದ ಶುಕ್ರವಾರ ಸಂಜೆ 6.45ರ ವೇಳೆಗೆ ನಂತೂರು ಜಂಕ್ಷನ್‌ನಿಂದ ಬಿಕರ್ನಕಟ್ಟೆ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಮಳೆ ಸುರಿಯುತ್ತಿದ್ದ ಕಾರಣ, ಕಂಡೆಟ್ಟು ಕ್ರಾಸ್‌ಗೆ ಮೊದಲು ಹೆದ್ದಾರಿಯಲ್ಲಿ ಬಿದ್ದಿದ್ದ ಗುಂಡಿಯೊಂದು ಅವರ ಗಮನಕ್ಕೆ ಬಂದಿರಲಿಲ್ಲ. ಕೊನೇ ಕ್ಷಣದಲ್ಲಿ ಗುಂಡಿತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಸ್ಕೂಟರ್‌ ಡಿವೈಡರ್‌ಗೆ ಡಿಕ್ಕಿಗೆ ಹೊಡೆದಿದೆ. ಡಿವೈಡರ್‌ನಲ್ಲಿ ಅಳವಡಿಸಲಾಗಿದ್ದ ರಿಫ್ಲೆಕ್ಟರ್ ರೇಲಿಂಗ್‌ಗೆ ಅವರ ತಲೆ ಬಡಿದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದರು.
ಘಟನೆ ಬಳಿಕ ರಸ್ತೆ ಗುಂಡಿಗಳನ್ನು ಮುಚ್ಚದ ಹೆದ್ದಾರಿ ಇಲಾಖೆ, ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸ್ನೇಹಿತನನ್ನು ಕಳೆದುಕೊಂಡ ನೋವನ್ನು ಮೌನ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಆಶಿತ್‌ಗೆ ಸಾವಿಗೆ ನ್ಯಾಯ ಕೊಡಿ. ‘ಮಂಗಳೂರು ರೋಡ್ ನೀಡ್ಸ್ ಸುರಕ್ಷಾ ಬಂಧನ್’ (ಮಂಗಳೂರು ರಸ್ತೆಗೆ ಸುರಕ್ಷಾ ಬಂಧನ ಬೇಕಾಗಿದೆ) ಪಾಟ್ ಹೋಲ್‌ಸೇ ಆಜಾದಿ (ರಸ್ತೆ ಗುಂಡಿಯಿಂದ ಸ್ವಾತಂತ್ರೃ), ವಿ ಡಿಮಾಂಡ್ ಸೇಫ್ ರೋಡ್ಸ್ (ಸುರಕ್ಷಿತ ರಸ್ತಗಳಿಗಾಗಿ ನಾವು ಆಗ್ರಹಿಸುತ್ತೇವೆ) ಎಂದು ಬರೆದ ಫಲಕವನ್ನು ಅವರು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net