

ಮುಂಡಗೋಡ: ದನ ಬೆದರಿಸುವ ಸ್ಪರ್ಧೆಯಲ್ಲಿ ದನ ಗುದ್ದಿ ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಪರಮೇಶ ಸಿದ್ದಪ್ಪ ಹರಿಜನ (21) ಮೃತಪಟ್ಟ ಯುವಕ. ದೀಪಾವಳಿ ಹಬ್ಬದ ನಿಮಿತ್ತ ಚಿಗಳ್ಳಿಯ ಕಲ್ಮೇಶ್ವರ ಮಠದ ಹತ್ತಿರ ದನ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿವಿಧ ಭಾಗಗಳಿಂದ ನೂರಾರು ದನಗಳು ಭಾಗವಹಿಸಿದ್ದವು. ಸ್ಪರ್ಧೆ ವೀಕ್ಷಿಸುತ್ತಿದ್ದ ಪರಮೇಶನ ಮೇಲೆ ದನವೊಂದು ಏಕಾಏಕಿ ದಾಳಿ ಮಾಡಿ ಎದೆಯ ಭಾಗಕ್ಕೆ ತಿವಿದಿದೆ. ಗಂಭೀರವಾಗಿ ಗಾಯಗೊಂಡ ಪರಮೇಶನನ್ನು ತಕ್ಷಣವೇ ತಾಲೂಕಾಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಯುವಕ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಾಗಿದೆ.