ಲೈನ್‌ಮನ್ ಬೇಜವಾಬ್ದಾರಿಯಿಂದ ಯುವಕ ಸಾವು

Pakeerappa Madivalar
Published on

ಹಾನಗಲ್ಲ: ಕೆಇಬಿ ಲೈನ್‌ಮನ್ ಬೇಜವಾಬ್ದಾರಿಯಿಂದಾಗಿ ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹೇರೂರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಲೈನ್‌ಮನ್ ತಾನು ಮಾಡಬೇಕಿದ್ದ ಕೆಲಸವನ್ನು ಯುವಕನಿಂದ ಮಾಡಿಸಿದ್ದೇ ಜೀವ ಹಾನಿಗೆ ಕಾರಣ ಎನ್ನಲಾಗಿದೆ.


ಹೇರೂರ ಗ್ರಾಮದ ಫಕೀರಪ್ಪ ಶಿವಾನಂದಪ್ಪ ಮಡಿವಾಳರ(36) ಮೃತಪಟ್ಟ ದುರ್ದೈವಿ. ಶನಿವಾರ ಸಂಜೆ ಮಳೆ-ಗಾಳಿಯಿಂದ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಸಮಸ್ಯೆ ಸರಿಪಡಿಸಬೇಕಿದ್ದ ಲೈನ್‌ಮನ್ ಗ್ರಾಮದ ಯುವಕನಿಂದ ಕೆಲಸ ಮಾಡಿಸಲು ತೆರಳಿದ್ದ. ಹೇರೂರ ಗ್ರಾಮದ ಗುಬ್ಬಿ ನಂಜುಂಡೇಶ್ವರಮಠ ಸಮೀಪ ಅಳವಡಿಸಿದ್ದ ಟಿಸಿಯಲ್ಲಿ ವಿದ್ಯುತ್ ತಂತಿ ಸರಿಪಡಿಸಿ ಇಳಿಯುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.


ಕೆಇಬಿ ಲೈನ್‌ಮನ್ ತಿರುಪತಿ ತಹಶೀಲ್ದಾರ್ ಎಂಬಾತ ವಿದ್ಯುತ್ ಕಂಬದಲ್ಲಿನ ವೈರ್ ಜೋಡಣೆ ಮಾಡಬೇಕಿತ್ತು. ಆದರೆ, ತಾನು ಮಾಡುವ ಕೆಲಸವನ್ನು ಫಕೀರಪ್ಪನಿಂದ ಮಾಡಿಸಲು ವಿದ್ಯುತ್ ಕಂಬವನ್ನು ಹತ್ತಿಸಿದ್ದ ಎನ್ನಲಾಗಿದೆ. ವಿದ್ಯುತ್ ರಿಪೇರಿಗಾಗಿ ಕಚೇರಿಗೆ ಸಂಪರ್ಕಿಸಿ ಎಲ್‌ಸಿಯನ್ನೂ ಪಡೆದುಕೊಂಡಿದ್ದ. ಕೆಲಸ ಮುಗಿದ ಮೇಲೆ ಫಕೀರಪ್ಪ ಕೆಳಗಿಳಿಯುವ ಮುನ್ನವೇ ಹೆಸ್ಕಾಂ ಕಚೇರಿಗೆ ಸಂಪರ್ಕಿಸಿ ವಿದ್ಯುತ್ ಹಾಕುವಂತೆ ತಿಳಿಸಿದ್ದನೆನ್ನಲಾಗಿದೆ.

ಈ ಸಂದರ್ಭದಲ್ಲಿ ವಿದ್ಯುತ್ ಕಂಬದಲ್ಲಿದ್ದ ಫಕೀರಪ್ಪನಿಗೆ ವಿದ್ಯುತ್ ಪ್ರವಹಿಸಿದೆ. ಫಕೀರಪ್ಪ ತಕ್ಷಣವೇ ಕಂಬದಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಆಡೂರು ಪೊಲೀಸ್ ಠಾಣೆಯಲ್ಲಿ ಮೃತನ ಸಂಬಂಧಿ ರವಿ ಮಡಿವಾಳರ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net