

ಮಂಡ್ಯ: ತಾಲೂಕಿನ ಇಂಡುವಾಳು ಗ್ರಾಮದ ಸಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅತಿವೇಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಗೆ ಹಾಕಲಾಗಿರುವ ಜಾಲರಿಗೆ ಡಿಕ್ಕಿ ಹೊಡೆದು ಪಲ್ಟಿಯೊಡೆದ ಪರಿಣಾಮ ಯುವಕ ಮೃತಪಟ್ಟು, ಚಾಲಕ ಗಾಯಗೊಂಡಿದ್ದಾನೆ.
ಬೆಂಗಳೂರಿನ ಚಿನ್ನಣ್ಣ ಲೇಔಟ್‌ನ ನಿವಾಸಿ ತುಷಾರ್ ಪ್ರಕಾಶ್ (20) ಮೃತ. ಚಾಲಕ ಪವನ್ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೈಸೂರು ದಸರಾ ನೋಡಲೆಂದು ಅ.1ರ ಬುಧವಾರ ತಡರಾತ್ರಿ ತುಷಾರ್ ಪ್ರಕಾಶ್ ಹಾಗೂ ಪವನ್ ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದಾರೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ. ತುಷಾರ್ ಪ್ರಕಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹೆದ್ದಾರಿಯಲ್ಲೇ ಅಪಘಾತವಾದ ಹಿನ್ನೆಲೆಯಲ್ಲಿ ಕೆಲ ಸಮಯ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು. ಸ್ಥಳಕ್ಕೆ ಧಾವಿಸಿದ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು, ತುಷಾರ್ ಪ್ರಕಾಶ್ ಮೃತದೇಹ ಹಾಗೂ ಪವನ್‌ನನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದರು. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.