

ಬಂಟ್ವಾಳ: ತೆಂಕಕಜೆಕಾರು ಗ್ರಾಮದ ಪಾದೆಮನೆ ಎಂಬಲ್ಲಿ ವಿಷದ ಹಾವು ಕಚ್ಚಿದ ಪರಿಣಾಮ ಅಶ್ರಫ್(28) ಎಂಬುವರು ಮಂಗಳವಾರ ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕರಾಗಿದ್ದ ಅವರು ಪಾಂಡವರಕಲ್ಲುವಿನ ಮನೆಯಲ್ಲಿ ಅಡಕೆ ಸುಲಿಯುವ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನದ ಹೊತ್ತು ಕಾಲಿನ ಬೆರಳಿಗೆ ವಿಷದ ಹಾವು ಕಚ್ಚಿತ್ತು. ತಕ್ಷಣ ಸಮೀಪದ ನಾಟಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರು. ಆದರೆ ಸ್ಥಿತಿ ಗಂಭೀರವಾಗುತ್ತಿದ್ದಂತೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಅಶ್ರಫ್‌ಗೆ ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ. ಅವರ ತಂದೆ ನಿಧನರಾಗಿದ್ದು, ಮನೆಗೆ ಅಶ್ರಫ್ ಅವರೇ ಆಧಾರವಾಗಿದ್ದರು.