

ಬೆಳಗಾವಿ: ವಕೀಲರು ತಮ್ಮ ಜ್ಞಾನ, ಕೌಶಲ, ಸಾಮಾಜಿಕ ಕಳಕಳಿ, ಉದಾತ್ತ ಗುಣಗಳಿಂದ ಸಮಾಜದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಬೇಕು ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿಶ್ವನಾಥ ತಿಳಿಸಿದರು.
ಶನಿವಾರ ನಗರದ ಕೆಎಲ್ ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ವಾರ್ಷಿಕೋತ್ಸವ ಅನುಬಂಧ-2023’ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಪರಿವರ್ತನೆಯಲ್ಲಿ ವಕೀಲರು ಮಹತ್ವದ ಪಾತ್ರ ನಿಭಾಯಿಸುತ್ತಾರೆ. ಈ ನಿಟ್ಟಿನಲ್ಲಿ ಯುವ ವಕೀಲರು ಸದಾ ಅಧ್ಯಯನಶೀಲರಾಗಿ ತಮ್ಮ ವೃತ್ತಿ ಜೀವನ ಅತ್ಯಂತ ಯಶಸ್ವಿಯಾಗಿಸಿಕೊಳ್ಳಬೇಕು ಎಂದರು.
ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರ್ಮನ್ ಹಾಗೂ ನ್ಯಾಯವಾದಿ ಅರ್.ಬಿ.ಬೆಲ್ಲದ ಮಾತನಾಡಿ, ವಕೀಲ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ. ಬೆಳಗಾವಿಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ ನಾಡಿಗೆ ಅತ್ಯಂತ ಶ್ರೇಷ್ಠ ವಕೀಲರನ್ನು ನೀಡಿದೆ ಎಂದರು.
ಕಾಲೇಜಿನ ಜಿಮ್ಖಾನ ಸಮನ್ವಯಾಧಿಕಾರಿ ಡಾ.ಉಮಾ ಹಿರೇಮಠ, ಮಹಾವಿದ್ಯಾಲಯದ ದೈಹಿಕ ಶಿಕ್ಷಣಾಧಿಕಾರಿ ಡಾ. ರಿಚಾ ರಾವ್ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಕಾನೂನು ವಿವಿಯಿಂದ ಪಿಎಚ್‌ಡಿ ಪಡೆದ ಹಿನ್ನೆಲೆಯಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಶ್ರೀನಿವಾಸ ಪಾಲಕೊಂಡ ಅವರನ್ನು ಸನ್ಮಾನಿಸಲಾಯಿತು. ಪ್ರಸಕ್ತ ವರ್ಷ ರಾಜ್ಯದ ವಿವಿಧ ಕಾನೂನು ಕಾಲೇಜಿನಲ್ಲಿ ನಡೆದ ಅಣಕು ಸ್ಪರ್ಧೆಗಳು ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸುನಂದಾ, ಮಹಾಲಕ್ಷ್ಮೀ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಬಿ.ಜಯಸಿಂಹ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಸುಪ್ರಿಯಾ ಸ್ವಾಮಿ ವರದಿ ವಾಚಿಸಿದರು. ಸಂತೋಷ ಪಾಟೀಲ ವಂದಿಸಿದರು.