ಯುವತಿಯೇ ಬಂದು ದೂರು ನೀಡಲಿ - ಸತೀಶ ಜಾರಕಿಹೊಳಿ

Satish Jarkiholi
Published on

ಬೆಳಗಾವಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಸೆಕ್ಸ್ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿ ಕೇವಲ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾಳೆ. ಇದರಿಂದ ಪ್ರಯೋಜನವಿಲ್ಲ. ಪೊಲೀಸ್ ಠಾಣೆಗೆ ಬಂದು ತನಗೆ ಯಾವ ರೀತಿ ಅನ್ಯಾಯವಾಗಿದೆ ಎಂದು ಆಕೆ ದೂರು ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಹೇಳಿದಂತೆ ಆ ಯುವತಿಯೇ ಪೊಲೀಸರ ಮುಂದೆ ಬಂದು ಕಾನೂನಾತ್ಮಕ ರೀತಿಯಲ್ಲಿ ದೂರು ನೀಡಬೇಕು. ಆ ಸಿಡಿ ಪ್ರಕರಣದ ಕುರಿತು ರಮೇಶ ಈಗಾಗಲೇ ದೂರು ಕೊಟ್ಟಿದ್ದಾರೆ. ಪೊಲೀಸ್ ತನಿಖೆ ಆರಂಭಗೊಂಡಿದ್ದು, ಫಲಿತಾಂಶಕ್ಕಾಗಿ ಕಾಯಬೇಕು. ಇಂತಹ ಪ್ರಕರಣಗಳ ಸತ್ಯಾಸತ್ಯತೆ ಪೊಲೀಸರಿಗೆ ಮಾತ್ರ ತಿಳಿದಿರುತ್ತದೆ. ನಮ್ಮ ಬಳಿ ಸಂಪೂರ್ಣ ಮಾಹಿತಿ ಇರುವುದಿಲ್ಲ ಎಂದರು.

ಸಿಡಿ ವಿಚಾರದಲ್ಲಿ ನನ್ನನ್ನು ಸಿಲುಕಿಸಲು ಯತ್ನಿಸಲಾಗುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರನ್ನೂ ಯಾರು ಈ ಪ್ರಕರಣದಲ್ಲಿ ಸಿಲುಕಿಸಲು ಆಗುವುದಿಲ್ಲ. ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಪ್ರಕರಣ ತಾರ್ಕಿಕ ಅಂತ್ಯ ಕಾಣಬೇಕಾದರೆ ಪೊಲೀಸರ ಪಾತ್ರವೇ ದೊಡ್ಡದಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net