ಕೃಷಿ ಜಾಗೃತಿಗೆ ‘ಯಂಗ್ ಹಾರ್ವೆಸ್ಟರ್ಸ್‌’ ಕಾರ್ಯಕ್ರಮ

young harvestors
Published on

ಬೆಂಗಳೂರು: ಕೃಷಿ ಪ್ರವಾಸೋದ್ಯಮ ಭಾಗವಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಕೃಷಿ ಜಾಗೃತಿಗಾಗಿ ‘ಯಂಗ್ ಹಾರ್ವೆಸ್ಟರ್ಸ್‌’ ಕಾರ್ಯಕ್ರಮಕ್ಕೆ ಜಿಕೆವಿಕೆಯಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಹಸಿರು ಆರ್ಗ್ಯಾನಿಕ್ ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಗರದ ಲಾರೆನ್ಸ್ ಶಾಲೆಯ 170ಕ್ಕು ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹಣ್ಣು-ತರಕಾರಿ, ಕೃಷಿ ಬೆಳೆಗಳು ಹಾಗೂ ಅವುಗಳ ಉತ್ಪಾದನೆ, ಕಟಾವು, ಮಾರಾಟ, ಸಂಸ್ಕರಣಾ ಪದಾರ್ಥಗಳ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ವಿವಿಯ ಕುಲಪತಿ ಡಾ. ಎಸ್.ವಿ.ಸುರೇಶ್, ಆಹಾರ ಉತ್ಪಾದನೆ ನಿರಂತರವಾಗಿ ಮುಂದುವರಿಯಲು ಮಕ್ಕಳಲ್ಲಿ ಕೃಷಿ ಬಗ್ಗೆ ಪೂರಕ ಮನೋಭಾವ ಬೆಳೆಸಬೇಕಿದೆ. ಇಂದಿನ ಮಕ್ಕಳೆಲ್ಲರೂ ನಾಳೆಯ ಕೃಷಿಕರು, ವಿಜ್ಞಾನಿಗಳಾಗಲಿದ್ದು, ದೇಶಕ್ಕೆ ಯುವ ಪೀಳಿಗೆ ಕೊಡುಗೆ ನೀಡಲು ಯಂಗ್ ಹಾರ್ವೆಸ್ಟೆರ್ಸ್‌ ಕಾರ್ಯಕ್ರಮ ಉಪಯುಕ್ತವಾಗಲಿದೆ ಎಂದು ಆಶಿಸಿದರು.

ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಮುಂದಿನ ಪೀಳಿಗೆಯ ಮಕ್ಕಳಿಗೆ ಕೃಷಿಯ ಮಹತ್ವವನ್ನು ತಿಳಿಸುವುದು ಹಾಗೂ ಉತ್ತಮ ಭವಿಷ್ಯವನ್ನು ನಿರ್ಮಿಸಲು ಶಾಲಾ ಮಕ್ಕಳಿಗೆ ಬೇಸಾಯದ ಜ್ಞಾನವನ್ನು ತಿಳಿಸಿ ಅವರಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಯತ್ನ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಎಂ.ಜಿ.ದಿನೇಶ್, ಕೃಷಿ ವಿವಿ ಡೀನ್ (ಕೃಷಿ) ಡಾ. ಎನ್.ಬಿ.ಪ್ರಕಾಶ್, ಉದ್ಯಮಿ ಐಶ್ವರ್ಯ ಡಿಕೆಎಸ್ ಹೆಗ್ಡೆ, ಹಸಿರು ಆರ್ಗ್ಯಾನಿಕ್ಸ್ ಸಂಸ್ಥೆಯ ಅಧ್ಯಕ್ಷ ಬಿ.ಸಿ.ಅರವಿಂದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net