ಸಾಹಿತ್ಯದಲ್ಲಿ ಯುವ ಪೀಳಿಗೆ ತೊಡಗಿಸಿಕೊಳ್ಳಬೇಕು: ಬೊಳ್ಳಜಿರ ಬಿ.ಅಯ್ಯಪ್ಪ

kodava makkada kuta
Published on

ಮಡಿಕೇರಿ: ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಯುವ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಲು ಕೊಡವ ಮಕ್ಕಡ ಕೂಟ ಸದಾ ಸಿದ್ಧವಿದೆ ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದರು.


ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಕೊಡವ ಮಕ್ಕಡ ಕೂಟದ ೮೮ನೇ ಪುಸ್ತಕ ಹಾಗೂ ಲೇಖಕಿ ಯಶೋಧ ಪೇರಿಯಂಡ ಅವರ ಪ್ರಥಮ ಪುಸ್ತಕ ಚುಪ್ಪಿ ಕತೆರ ಜೊಪ್ಪೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ರಚನೆಗೊಂಡ ಒಟ್ಟು ೮೭ ಪುಸ್ತಕಗಳನ್ನು ಕೂಟದ ಮೂಲಕ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಹೊಸ ಬರಹಗಾರರೊಂದಿಗೆ ಯುವ ಬರಹಗಾರರನ್ನೂ ಪರಿಚಯಿಸುತ್ತಾ ಬರಲಾಗಿದೆ. ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಯುವ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಾಗಿದೆ, ಆ ಮೂಲಕ ಸಾಹಿತ್ಯ ಕೃಷಿ ಆಗಬೇಕಾಗಿದೆ. ಇದೇ ಕಾರಣಕ್ಕೆ ಕೂಟ ಯುವ ಬರಹಗಾರರಿಗೆ ಹೆಚ್ಚು ಉತ್ತೇಜನ ನೀಡುತ್ತಿದೆ ಎಂದು ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದರು.


ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯ, ಸಾಹಿತ್ಯ, ಸಂಸ್ಕೃತಿಯ ಬೆಳೆವಣಿಗೆಗಾಗಿ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ೧೦೦ ಪುಸ್ತಕಗಳ ಗಡಿ ಮುಟ್ಟುವ ಗುರಿ ಹೊಂದಿದೆ. ಉಳಿದಿರುವ ೧೨ ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಮತ್ತಷ್ಟು ಬರಹಗಾರರು ಮುಂದೆ ಬಂದರೆ ಪ್ರೋತ್ಸಾಹ ನೀಡಲಾಗುವುದು ಎಂದರು.


ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ೮೭ ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ ಎಂದು ತಿಳಿಸಿದರು.


ಚುಪ್ಪಿ ಕತೆರ ಜೊಪ್ಪೆ ಪುಸ್ತಕದ ಲೇಖಕಿ ಯಶೋಧ ಪೇರಿಯಂಡ ಮಾತನಾಡಿ, ಈ ಪುಸ್ತಕ ವಿಭಿನ್ನ ವಿಷಯಗಳ ಸಣ್ಣಕಥೆಗಳ ಸಂಗ್ರಹವಾಗಿದ್ದು, ಮಕ್ಕಳ ಸಾಹಸ, ಹೆಣ್ಣುಮಕ್ಕಳ ಸಬಲೀಕರಣ, ಜೀವನ ಪರಿವರ್ತನೆ ಮತ್ತಿತರ ವಿಚಾರಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.


ಚಿಕ್ಕವಯಸ್ಸಿನಿಂದಲೇ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದ ನಾನು ಸಣ್ಣ ಸಣ್ಣ ಕಥೆಗಳನ್ನು ಬರೆಯಲು ಪ್ರಾರಂಭಿಸಿದೆ. ಹಲವು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಕೆಲವು ಸಮಯ ಬರೆಯುವುದನ್ನು ನಿಲ್ಲಿಸಿದ ನಾನು ತಂದೆ-ತಾಯಿಯ ಪ್ರೇರಣೆಯಿಂದ ಹಾಗೂ ಹಿತೈಷಿಗಳ ಪ್ರೋತ್ಸಾಹದಿಂದ ಮತ್ತೆ ಬರೆಯುವುದನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ ಅವರು, ಪುಸ್ತಕ ಬಿಡುಗಡೆಗೆ ಸಹಕರಿಸಿದ ಕೊಡವ ಮಕ್ಕಡ ಕೂಟ ಸಂಘಟನೆಗೆ ಧನ್ಯವಾದ ಸಲ್ಲಿಸಿದರು.


ಸಮಾಜ ಸೇವಕ ಚಂಗಂಡ ಗಿರೀಶ್ ತಮ್ಮಯ್ಯ ಮಾತನಾಡಿ, ಬರಹವನ್ನು ಪುಸ್ತಕದ ರೂಪದಲ್ಲಿ ಹೊರತರುವುದು ಕಷ್ಟದ ಕೆಲಸ. ಆದರೆ, ಕೊಡವ ಮಕ್ಕಡ ಕೂಟ ಇದನ್ನು ಸುಲಭ ಮಾಡಿಕೊಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಲೇಖಕಿ ಯಶೋಧ ಪೇರಿಯಂಡರವರ ತಂದೆ ಪೇರಿಯಂಡ ಸುಬ್ರಮಣಿ ಹಾಗೂ ತಾಯಿ ಪೇರಿಯಂಡ ಕನ್ನು ಭೋಜಮ್ಮ ಅವರು ಪುಸ್ತಕ ಬಿಡುಗಡೆಗೊಳಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಮುಕ್ಕಾಟಿರ ಅಂಜು ಸುಬ್ರಮಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net