

ಚನ್ನರಾಯಪಟ್ಟಣ: ಯುವಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ವಿಷಾದಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಂಗಳವಾರ ಕರ್ನಾಟಕ ಜಾನಪದ ಪರಿಷತ್‌ನ ತಾಲೂಕು ಘಟಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನ್ನಡ ವಿಭಾಗ, ಹಾಗೂ ಅನಿಕೇತನ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಕಂಸಾಳೆ ಮತ್ತು ಡೊಳ್ಳು ಕುಣಿತ ಹಾಗೂ ಜನಪದ ಗೀತೆಗಳ ಕಲಿಕಾ ತರಬೇತಿ ಶಿಬಿರದ ಪ್ರಾತ್ಯಕ್ಷಿಕೆ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭಾರತೀಯ ಗ್ರಾಮೀಣ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮೇರು ಮಟ್ಟಕ್ಕೆ ಕೊಂಡೊಯ್ದ ಮೂಲ ಬೇರು ಜನಪದ ಕಲೆ. ಯುವ ಜನತೆ ಇದನ್ನು ಆಹ್ಲಾದಿಸುವ ಮೂಲಕ ಕಲೆ, ಸಂಸ್ಕೃತಿಗೆ ಜೀವ ತುಂಬಬೇಕು. ಭಾರತೀಯ ಕಲೆ ಮತ್ತು ಸಂಸ್ಕೃತಿಯು ಜೀವನದ ಅವಿಭಾಜ್ಯ ಅಂಗ. ಜಾನಪದ ಸಂಸ್ಕೃತಿ ಪುರಾತನ ಸಂಸ್ಕೃತಿಯಾಗಿದ್ದು, ಇಲ್ಲಿನ ಅಚಾರ-ವಿಚಾರ, ಕಲೆ, ಸಂಸ್ಕೃತಿಯು ವಿಶ್ವದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ನಮ್ಮ ಪುರಾತನ ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಅಗತ್ಯವಿದೆ ಎಂದರು.
ಯುವಜನರು ಪಾಶ್ಚಾತ್ಯ ಸಂಸ್ಕೃತಿಯ ನೃತ್ಯ ಮತ್ತಿತರ ಕಲೆಗೆ ಹೆಚ್ಚಿನ ಮನ್ನಣೆ ನೀಡುತ್ತಿರುವ ಕಾರಣ ವಿದ್ಯಾರ್ಥಿಗಳು ಅದನ್ನೇ ಜೀವನದ ಶೈಲಿಯಾಗಿ ಅನುಸರಿಸುತ್ತಿದ್ದಾರೆ. ಇಂತಹ ಮನೋಭಾವವನ್ನು ಬದಲಾಯಿಸಿ ದೇಸಿಯ ಕಲೆ ಮತ್ತು ಸಂಸ್ಕೃತಿ ರೂಢಿಸಲು ಮುಂದಾಗಬೇಕು. ಸ್ಥಳೀಯ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿರುವ ಯುವಕರಲ್ಲಿ ಇವುಗಳ ಬಗ್ಗೆ ಅಭಿರುಚಿ ಮೂಡಿಸುವ ಜತೆ ನೈತಿಕ ಮೌಲ್ಯಗಳನ್ನು ಬಿತ್ತಬೇಕಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್.ಎಚ್.ಗಂಗೇಗೌಡ ಅಧ್ಯಕ್ಷೀಯ ಭಾಷಣ ಮಾಡಿದರು. ಶಿಬಿರದ ಪ್ರಾತ್ಯಕ್ಷಿಕೆ ಕುರಿತು ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಸಂತೋಷ್ ದುಂಡಗೂರು ಮಾತನಾಡಿದರು. ಜಾನಪದ ವಿದ್ವಾಂಸ ಮೇಟಿಕೆರೆ ಹಿರಿಯಣ್ಣ, ಡಾ.ಮುನಿರಾಜ್, ಡಾ.ವಾಸುದೇವ್, ಕೃಷ್ಣ, ಮುಳ್ಳುಕೆರೆ ಪ್ರಕಾಶ್, ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಸಾಂಸ್ಕೃತಿಕ ಸಂಚಾಲಕ ಜೆ.ಎಸ್.ಗುರುರಾಜ್, ತರಬೇತುದಾರ ಮಂಜು ಮಟ್ಟನವಿಲೆ, ಪರಿಷತ್‌ನ ಪದಾಧಿಕಾರಿಗಳು, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.