ಅನಾನಸ್ ಕೃಷಿಯಲ್ಲಿ ಯುವ ರೈತ ಮಲ್ಲಿಕಾರ್ಜುನ ಯಶಸ್ಸು

Painapal Crop in byadagi
Published on


ಬ್ಯಾಡಗಿ: ಅಡಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಅನಾನಸ್ ಬೆಳೆದು ತಾಲೂಕಿನ ಸಿದ್ದಾಪುರ ಗ್ರಾಮದ ಯುವ ರೈತರೊಬ್ಬರು ಯಶಸ್ವಿಯಾಗಿದ್ದು, ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
ಸಿದ್ದಾಪುರ ಗ್ರಾಮದ ಮಲ್ಲಿಕಾರ್ಜುನ ಹನುಮಂತಪ್ಪ ಕಚವಿ ಅವರೇ ಸಾಧಕ ಯುವ ರೈತ. ಒಂದು ಎಕರೆಯಲ್ಲಿ ತೋಟ ಮಾಡಿದ್ದಾರೆ. ಅಡಕೆಯಲ್ಲಿ ವಿವಿಧ ದ್ವಿದಳ ಧಾನ್ಯಗಳನ್ನು ಮಿಶ್ರ ಬೆಳೆಯಾಗಿ ಬೆಳೆ ದಿದ್ದರು. ಏನಾದರೂ ಹೊಸತನ್ನು ಮಾಡ ಬೇಕೆಂಬ ಮಲ್ಲಿಕಾರ್ಜುನ ಅವರಲ್ಲಿನ ತುಡಿತ ಅವರನ್ನು ಅನಾನಸ್ ಬೆಳೆ ಆಕರ್ಷಿಸಿತು.
ಜಿಲ್ಲೆಯ ಹವಾಮಾನ ಅನಾನಸ್ ಬೆಳೆಗೆ ಸೂಕ್ತವಾಗಿಲ್ಲ. ಈ ಹಿಂದೆ ಹಲವು ರೈತರು ಇಂತಹ ಬೆಳೆಗೆ ಮುಂದಾಗಿ ಕೈಸುಟ್ಟುಕೊಂಡಿದ್ದ ಸಾಕಷ್ಟು ಉದಾಹರಣೆಗಳಿವೆ. ಮಲ್ಲಿಕಾರ್ಜುನ ಅವರು ಅನಾನಸ್ ಬೆಳೆಯುವ ವಿಚಾರವನ್ನು ತಿಳಿಸಿದಾಗ ಕೃಷಿ ತಜ್ಞರು, ತೋಟಗಾರಿಕೆ ಅಧಿಕಾರಿಗಳು, ಇಲ್ಲಿನ ವಾತಾವರಣ ಕಾರಣ ಬೆಳೆ ಬೆಳೆಯುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದಾಗ್ಯೂ ಛಲ ಬಿಡದ ಮಲ್ಲಿಕಾರ್ಜುನ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲ ರೈತರು ಅಡಕೆಯಲ್ಲಿ ಅನಾನಸ್ ಬೆಳೆದಿರುವ ಮಾಹಿತಿ ಪಡೆದರು.
ಅನಾನಸ್ ಬೆಳೆಯಲು ಮಲ್ಲಿಕಾರ್ಜುನ ಅವರು 18 ತಿಂಗಳಿಗೆ 1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಈಗ ಕೆಜಿಗೆ 21 ರೂಪಾಯಿಯಂತೆ ಮಾರಾಟವಾಗುತ್ತಿದೆ. ಒಟ್ಟು 20 ಟನ್ ಫಸಲು ಬಂದಿದೆ. ಇದರ ಮಾರಾಟದಲ್ಲಿ 1ಲಕ್ಷ ರೂಪಾಯಿ ಖರ್ಚು ಕಳೆದು 3.30 ಲಕ್ಷ ರೂಪಾಯಿ ಲಾಭ ಪಡೆದಿದ್ದಾರೆ.
ಅಲ್ಪ ನೀರಿನ ಸದ್ಬಳಕೆ: ಬೇಸಿಗೆಯಲ್ಲಿ ಉಷ್ಣ ವಾತಾವರಣದಿಂದಾಗಿ ಬೆಳೆ ಉಸಿಕೊಳ್ಳುವುದು ಸುಲಭದ ಮಾತಲ್ಲ. ಈ ರೈತನಿಗೆ ಅಂತಹ ಸಂಕಷ್ಟ ಬಂದರೂ ಕುಗ್ಗದೆ, ಅಲ್ಪ ನೀರಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡಿಕೊಂಡಿದ್ದಾರೆ. ವಿದ್ಯುತ್ ಕಣ್ಣ ಮುಚ್ಚಾಲೆ ಹಾಗೂ ಕೂಲಿಕಾರರ ಸಮಸ್ಯೆ ಎದುರಾದರೂ ಯಾವುದಕ್ಕೂ ಜಗ್ಗದೆ ಕುಟುಂಬ ಸಮೇತರಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದು, ಯಶಸ್ಸು ಕಂಡಿದ್ದಾರೆ.

ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಮಲ್ಲಿಕಾರ್ಜುನ ಕಚವಿ ಅವರು ಒಂದು ಎಕರೆ ಅಡಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಅನಾನಸ್ ಬೆಳೆದಿರುವುದು ಹಾವೇರಿ ಜಿಲ್ಲೆಯಲ್ಲಿ ಉತ್ತಮ ಸಾಧನೆಯಾಗಿದೆ. ಅವರಿಗೆ ಜಿಲ್ಲಾ ಕೃಷಿ ಇಲಾಖೆ ಆತ್ಮನಿರ್ಭರ ಯೋಜನೆಯಡಿ 25 ಸಾವಿರ ರೂಪಾಯಿ ನಗದು ನೀಡಿದೆ. ಅಲ್ಲದೆ, ರಾಜ್ಯ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ರೈತರು ಎದೆಗುಂದದೇ ವೈಜ್ಞಾನಿಕತೆ ಅಳವಡಿಸಿಕೊಂಡು ಕೃಷಿ ಸಾಧನೆಗೆ ಮುಂದಾಗಬೇಕು. ಅಂತಹ ರೈತರಿಗೆ ಇಲಾಖೆ ಪ್ರೋತ್ಸಾಹ ನೀಡಲಿದೆ.ಅಶೋಕ ಕುರುಬರತೋಟಗಾರಿಕೆ ಸಹಾಯಕ ನಿರ್ದೇಶಕ ಬ್ಯಾಡಗಿ ಒಂದು ಎಕರೆ ಅಡಕೆಯಲ್ಲಿ ಮಿಶ್ರ ಬೆಳೆಯಾಗಿ ಅಲ್ಪ ನೀರಿನಲ್ಲಿ ಏನಾದರೂ ಬೆಳೆಯಬೇಕೆಂದು ನಿರ್ಧರಿಸಿದೆ. ಈ ಸಮಯಲ್ಲಿ ಕೃಷಿ ಸಲಹೆಗಾರ ಗಂಗಾಧರ ಕುಲಕರ್ಣಿ ಜೈವಿಕ ಉತ್ಪನ್ನಗಳ ಬಳಕೆ, ಹೊಸ ಕೃಷಿ ಮಾದರಿ ತಿಳಿಸಿದರು. ಅಲ್ಲದೆ, ತೋಟಗಾರಿಕೆ, ಕೃಷಿ ಎಲ್ಲ ಇಲಾಖೆ ಅಧಿಕಾರಿಗಳು ನನಗೆ ಆಗಾಗ ಮಾರ್ಗದರ್ಶನ ನೀಡಿದ ಪರಿಣಾಮ ಅನಾನಸ್ ಬೆಳೆದೆ. ಬೆಳೆಯುವುದಿಲ್ಲ ಎನ್ನುವ ಬದಲು ಬೆಳೆದು ತೋರಿಸುವೆ ಎಂದು ಛಲ ತೊಟ್ಟಾಗ ಎಲ್ಲವೂ ಯಶಸ್ವಿಯಾಗಲಿದೆ.ಮಲ್ಲಿಕಾರ್ಜುನ ಹನುಮಂತಪ್ಪ ಕಚವಿಅನಾನಸ್ ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net