

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 69ರ ನಂತೂರು-ಪಂಪುವೆಲ್ ನಡುವಿನ ತಾರೆತೋಟ ಬಳಿ ಸೋಮವಾರ ತಡರಾತ್ರಿ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಫಿಸಿಯೋಥೆರಪಿ ವೈದ್ಯರೊಬ್ಬರು ಮೃತಪಟ್ಟಿದ್ದಾರೆ.
ಮೂಲತಃ ಕೇರಳದ ಅಲುಝ ನಿವಾಸಿ ಡಾ.ಮೊಹಮ್ಮದ್ ಅಮಲ್ (29) ಅಪಘಾತದಲ್ಲಿ ಮೃತಪಟ್ಟ ವೈದ್ಯ.
ಘಟನೆ ವಿವರ: ಮೊಹಮ್ಮದ್ ಅಮಲ್ ಅವರು ಸೋಮವಾರ ರಾತ್ರಿ 11.40ರ ಸುಮಾರಿಗೆ ತನ್ನ ಗೆಳತಿ ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿನಿ ಜತೆಗೆ ಕಾರಿನಲ್ಲಿ ನಂತೂರು ಕಡೆಯಿಂದ ಪಂಪ್‌ವೆಲ್ ಕಡೆಗೆ ತೆರಳುತ್ತಿದ್ದರು. ಮಳೆ ಬಂದ ಕಾರಣ ವೇಗವಾಗಿ ಚಲಿಸುತ್ತಿದ್ದ ಕಾರು ತಾರೆತೋಟ ಬಳಿ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಸುಮಾರು 20 ಮೀಟರ್ ದೂರ ಡಿವೈಡರ್‌ನಲ್ಲೇ ಚಲಿಸಿದ ಕಾರು ಬಳಿಕ 3 ಪಲ್ಟಿಯಾಗಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ನಗರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿವೈಡರ್‌ನ ಸರಳುಗಳು ಅಮಲ್ ಅವರ ದೇಹಕ್ಕೆ ಹೊಕ್ಕು ಗಂಭೀರ ಗಾಯವಾಗಿತ್ತು. ಅಮಲ್ ಅವರ ಜತೆಗಿದ್ದ ವಿದ್ಯಾರ್ಥಿನಿ ನಗರದ ಖಾಸಗಿ ಕಾಲೇಜಿನಲ್ಲಿ ಬಿಡಿಎ ಓದುತ್ತಿದ್ದು, ಅವರಿಗೆ ಅಲ್ಪ-ಸ್ವಲ್ಪ ಗಾಯವಾಗಿದೆ.
ಗೂಡ್ಸ್ ಲಾರಿಯೂ ಪಲ್ಟಿ: ನಂತೂರು ಹೆದ್ದಾರಿಯಲ್ಲಿ ಕಾರು ಅಪಘಾತಗೊಂಡ ಬಳಿಕ ಇದೇ ದಾರಿಯಲ್ಲಿ ಬರುತ್ತಿದ್ದ ಲಾರಿ ಚಾಲಕ ಅಪಘಾತಕ್ಕೀಡಾದ ಕಾರನ್ನು ನೋಡಿಕೊಂಡು ಬರುತ್ತಿದ್ದ. ಈ ಸಂದರ್ಭ ಎದುರಿನಲ್ಲಿದ್ದ ವಾಹನಗಳು ಹಠಾತ್ ಬ್ರೇಕ್ ಹಾಕಿದ ಕಾರಣ ಲಾರಿಯೂ ಹೆದ್ದಾರಿಯಲ್ಲಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಇದರಿಂದ ನಂತೂರು ಹೆದ್ದಾರಿಯಲ್ಲಿ ರಾತ್ರಿ ವಾಹನ ದಟ್ಟಣೆ ಉಂಟಾಗಿತ್ತು.
ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.