

ಧನಂಜಯ ಗುರುಪುರ
ಜೀವನ ಎಷ್ಟೇ ಕಠಿಣ ಹಾದಿಯಲ್ಲಿದ್ದರೂ ಛಲವೊಂದಿದ್ದರೆ ಗೆಲುವಿನ ಬೆಳಕು ನಿಶ್ಚಿತ ಎಂಬ ಆಶಾವಾದದೊಂದಿಗೆ ಜೀವನ ಸಾಗಿಸುತ್ತಿದೆ ಕುಪ್ಪೆಪದವಿನ ಒಂದು ಕುಟುಂಬ. ಕೋವಿಡ್‌ನಿಂದ ಕಂಗೆಟ್ಟಿದ್ದ ಆ ಮನೆಗೆ ಬೆನ್ನೆಲುಬಾಗಿರುವುದು ಕಾಲೇಜು ಓದುತ್ತಿರುವ ಪುತ್ರ.
ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಜಯ ಎಸ್.ಪೂಜಾರಿ ಮತ್ತು ಚೇತನಾ ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಮಗ ಮೂಡುಬಿದಿರೆ ಬನ್ನಡ್ಕ ವಿಶ್ವವಿದ್ಯಾಲಯ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾನೆ. ಪುತ್ರಿ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದಾಳೆ.
ಹಿಂದೆ ಪುಣೆಯಲ್ಲಿದ್ದ ಜಯ ಎಸ್. ಪೂಜಾರಿ ಕುಟುಂಬ ಕರೊನಾ ಬಾಧಿಸಿದ ಬಳಿಕ ಕುಪ್ಪೆಪದವಿಗೆ ಬಂದು ದೇವಿನಗರದ ಕುಟಿನ್ಹೋ ಕಂಪೌಂಡಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದೆ. ಕೋವಿಡ್‌ನಿಂದ ಸಾವಿನಂಚಿಗೆ ಹೋಗಿದ್ದ ಜಯ ಎರಡೂ ಕಾಲಿನ ಸ್ವಾಸ್ಥ್ಯ ಕಳೆದುಕೊಂಡು ಮನೆಯಲ್ಲಿದ್ದಾರೆ. ಕಷ್ಟ ಎದುರಾದರೂ ಕುಗ್ಗದೆ ಕಾಲೇಜು ಓದುತ್ತಿರುವ ಮಗ ನಿತೇಶ್ ಪೂಜಾರಿ ದೋಸೆ ಸ್ಟಾಲ್ ಹಾಕಿ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ.
ಈತ ಗುರುಪುರ ಕೈಕಂಬದ ಗಣೇಶ ಕಟ್ಟೆಯ ಬಳಿ ದೋಸೆ ಮಾರಾಟದ ಪುಟ್ಟ ಸ್ಟಾಲ್ ಹಾಕಿದ್ದು, ಆರು ತಿಂಗಳಿಂದ ಸಂಜೆ 4ರಿಂದ ರಾತ್ರಿ 9ರವರೆಗೆ ದೋಸೆ ಮಾರಾಟ ಮಾಡುತ್ತಾರೆ. ಮನೆಯಲ್ಲಿ ತಂದೆ ಹಾಗೂ ಸ್ಟಾಲ್‌ನಲ್ಲಿ ತಾಯಿ ಚೇತನಾ ಜತೆಗಿದ್ದು ಸಹಕರಿಸುತ್ತಾರೆ. ಕಾಲೇಜು ಮುಗಿದ ಬಳಿಕ ಮನೆಗೆ ಆಗಮಿಸುವ ನಿತೇಶ್, ತಾಯಿ ಮತ್ತು ತಂದೆ ಸಿದ್ಧಪಡಿಸಿದ ದೋಸೆ ತಯಾರಿಯ ಕಚ್ಚಾ ವಸ್ತುಗಳ ಮೂಟೆಯೊಂದಿಗೆ ಸ್ಕೂಟರ್‌ನಲ್ಲಿ ಕೈಕಂಬ ಪೇಟೆಗೆ ಬಂದು ವ್ಯಾಪಾರ ನಡೆಸುತ್ತಾರೆ.
ಸಂಜೆಯಾಗುತ್ತಲೇ ಈತನ ‘ಸಾಯಿ’ ಸ್ಟಾಲ್‌ನಲ್ಲಿ ಅಗ್ಗದ ಬೆಲೆಗೆ ಸ್ವಾದಿಷ್ಟಕರ ಮಸಾಲಾ ದೋಸಾ, ಈರುಳ್ಳಿ ಉತ್ತಪ್ಪ, ಸೆಟ್ ದೋಸೆ ಮತ್ತು ಲೋನಿ ಸ್ಪಂಜ್ ದೋಸೆ ಸವಿಯಲು ದಿನಗೂಲಿ ಕಾರ್ಮಿಕರು, ಕಚೇರಿ ಉದ್ಯೋಗಿಗಳು ಸಾಲು ನಿಲ್ಲುತ್ತಾರೆ.
ಮಳೆ ಇದ್ದರೆ ಸುಮಾರು 1,500 ರೂ.ವರೆಗೆ ವ್ಯಾಪಾರವಾಗುತ್ತದೆ. ದೋಸೆ ವ್ಯಾಪಾರ ಕೆಲಸ ಮುಗಿಸಿ ರಾತ್ರಿ ವೇಳೆ ಮನೆಯಲ್ಲಿ ಓದುತ್ತೇನೆ. ಎಷ್ಟೇ ಕಷ್ಟವಾದರೂ, ಮುಂದೆ ಉತ್ತಮ ದಿನಗಳು ಬರಬಹುದೆಂದು ನಾನು ನಂಬಿದ್ದೇನೆ.
-ನಿತೇಶ್ ಪೂಜಾರಿ, ಶ್ರಮಜೀವಿ ವಿದ್ಯಾರ್ಥಿ
ಮಗ ಓದಿನ ಜತೆಗೆ ಅತ್ಯಂತ ಸಂತೋಷದಿಂದ ದೋಸಾ ಸ್ಟಾಲ್ ನಡೆಸುತ್ತಾನೆ. ವ್ಯಾಪಾರದಿಂದ ಬಂದ ಹಣ ಕುಟುಂಬಕ್ಕೆ ಸಾಕಾಗುತ್ತದೆ. ಕಾಲೇಜಿಗೆ ಹೋಗುವವರು ಇಂತಹ ಸ್ಟಾಲ್ ನಡೆಸುವುದಾ ಎಂಬ ಭಾವನೆ ಅವನಲ್ಲಿಲ್ಲ. ಹಿಂದೆ ಪುಣೆಯಲ್ಲಿ ಆತನ ತಂದೆಯವರೂ ದೋಸಾ ಸ್ಟಾಲ್ ಹೊಂದಿದ್ದರು. ಮಗನ ಉತ್ಸಾಹ ನಮಗೆ ಸ್ಫೂರ್ತಿ.
-ಚೇತನಾ ಪೂಜಾರಿ, ನಿತೇಶ್ ತಾಯಿ