

ಹುಬ್ಬಳ್ಳಿ : ಗರ್ಭಿಣಿಯರು ಹಾಗೂ ಮಕ್ಕಳಿಗೆ ನಿಗದಿತ ಸಮಯಕ್ಕೆ ಲಸಿಕೆ ಹಾಕುವುದನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯ ಪರಿಚಯಿಸಿದ್ದ ‘ಯು-ವಿನ್’ ಪೋರ್ಟ್ಲ್ ಆಪ್ ಗುರುವಾರದಿಂದ ಧಾರವಾಡ ಜಿಲ್ಲೆಯಲ್ಲಿಯೂ ಪ್ರಾಯೋಗಿಕವಾಗಿ ಕಾರ್ಯಾರಂಭಗೊಂಡಿದೆ.
ಕೋವಿಡ್ ಸಮಯದಲ್ಲಿ ಜಾರಿಗೆ ತಂದಿದ್ದ ‘ಕೋ-ವಿನ್’ ಆಪ್ನ ತದ್ರೂಪಿ ಆಪ್ ಇದಾಗಿದೆ. ಗರ್ಭಿಣಿ ಹಾಗೂ ನವಜಾತ ಶಿಶುಗಳು ಮೊದಲ ಲಸಿಕೆ ಹಾಕಿಸಿಕೊಂಡ ನಂತರ ಮುಂದಿನ ಲಸಿಕೆ ಯಾವ ಸಮಯದಲ್ಲಿ ಹಾಕಿಸಿಕೊಳ್ಳಬೇಕು ಎಂಬುದನ್ನು ಅರಿಯಲು ಈ ಆಪ್ ಸಹಾಯವಾಗಲಿದೆ.
ಈ ಮೊದಲು ಗರ್ಭಿಣಿಯರು ಹಾಗೂ ಮಕ್ಕಳಿಗೆ ಯಾವ ಸಮಯಕ್ಕೆ ಲಸಿಕೆ ಹಾಕಬೇಕು ಎಂಬುದನ್ನು ಪ್ರಾಥಮಿಕ ಸುರಕ್ಷಣಾ ಅಧಿಕಾರಿಗಳು ಲಿಖಿತ ದಾಖಲೆಗಳನ್ನು ಇಟ್ಟುಕೊಳ್ಳುತ್ತಿದ್ದರು.
ಇನ್ನು ಮುಂದಿನ ದಿನಗಳಲ್ಲಿ ಲಿಖಿತ ದಾಖಲೆ ಬದಲು ಪ್ರತಿ ಬಾರಿ ಚುಚ್ಚುಮದ್ದು ಹಾಕಿದ ಸಂದರ್ಭದಲ್ಲಿ ಈ ಆಪ್ನಲ್ಲಿ ವಿವರಗಳನ್ನು ದಾಖಲೆ ಮಾಡಿದರೆ ಸಾಕು, ಮುಂದಿನ ಲಸಿಕೆಯ ದಿನವನ್ನು ಸರಳವಾಗಿ ಕಂಡುಕೊಳ್ಳಬಹುದು.
ಗರ್ಭಿಣಿಯ ಆಧಾರ್ ಕಾರ್ಡ್ ಅಥವಾ ಮಗುವಿನ ತಂದೆಯ ಆಧಾರ್ ಕಾರ್ಡ್ ಸಂಖ್ಯೆಯನ್ನು ಈ ಪೋರ್ಟಲ್ನಲ್ಲಿ ನೋಂದಾಯಿಸಿ, ಲಸಿಕೆಯ ವಿವರಗಳನ್ನು ದಾಖಲಿಸಿದರೆ ಸಾಕು. ಲಸಿಕೆಯ ಮುಂದಿನ ದಿನಾಂಕವನ್ನು ಸರಳವಾಗಿ ತಿಳಿದುಕೊಳ್ಳಬಹುದು. ಇದರಿಂದ ಗರ್ಭಿಣಿ ಅಥವಾ ಮಕ್ಕಳಿಗೆ ಸಕಾಲದಲ್ಲಿ ಲಸಿಕೆ ದೊರೆಯಲು ಸಹಾಯವಾಗುತ್ತದೆ.
ಲಸಿಕೆ ಪಡೆದುಕೊಳ್ಳುವ ಗರ್ಭಿಣಿ ಅಥವಾ ಮಕ್ಕಳ ಪೋಷಕರ ಮೋಬೈಲ್ಗೂ ಲಸಿಕೆ ದಿನಾಂಕದ ಮಾಹಿತಿ ಲಭ್ಯವಾಗುತ್ತದೆ.
ಕೋ-ವಿನ್ ಪೋರ್ಟ್ಲ್ ನಲ್ಲಿ ಗರ್ಭಿಣಿಯರು ಹಾಗೂ ಮಕ್ಕಳ ವಿವರ ದಾಖಲಿಸಿ, ಲಸಿಕೆ ಹಾಕುವ ಪರೀಕ್ಷಾರ್ಥ ಕಾರ್ಯವನ್ನು ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಈ ಮೊದಲು ಮಾಡಿತ್ತು. ಇದೀಗ ವಿವಿಧ ಜಿಲ್ಲೆಗಳಲ್ಲಿಯೂ ಪ್ರಾತ್ಯಕ್ಷಿಕೆ ಕಾರ್ಯ ಗುರುವಾರದಿಂದ ಆರಂಭಗೊಂಡಿದೆ.
ಪೋರ್ಟಲ್ನಲ್ಲಿ ಗರ್ಭಿಣಿಯರ ಮತ್ತು ಮಕ್ಕಳ ಲಸಿಕೆ ವಿವರಗಳನ್ನು ದಾಖಲಿಸುವ ಬಗ್ಗೆ ಪ್ರಾಥಮಿಕ ಸುರಕ್ಷಣಾ ಅಧಿಕಾರಿಗಳಿಗೆ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ತರಬೇತಿ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ತರಬೇತಿ ನಂತರ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಪೋರ್ಟಲ್ನ ಕಾರ್ಯವೈಖರಿ ಆರಂಭಗೊಳ್ಳಲಿದೆ.
ರಾಜ್ಯದಾದ್ಯಂತ ಎಷ್ಟು ಗರ್ಭಿಣಿಯರು ಅಥವಾ ಮಕ್ಕಳಿಗೆ ಯಾವ, ಯಾವ ಲಸಿಕೆ ಮಾಡಲಾಗಿದೆ, ಮುಂದಿನ ಲಸಿಕೆ ಯಾವುದು ಎಂಬುದನ್ನು ಈ ಪೋರ್ಟಲ್ ಮೂಲಕ ಸರಳವಾಗಿ ತಿಳಿದುಕೊಳ್ಳಬಹುದು. ಇದರಿಂದ ಮುಂದಿನ ಲಸಿಕೆ ಕೊರತೆಯಾಗದಂತೆಯೂ ನೋಡಿಕೊಳ್ಳಬಹುದಾಗಿದೆ ಎನ್ನುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು.