ಡಿ.6ರ ಬಳಿಕ ಎಲ್ಲವನ್ನೂ ಹೇಳ್ತಿನಿ:ಕುತೂಹಲ ಕೆರಳಿಸಿರುವ ವಿ.ಸೋಮಣ್ಣ ಹೇಳಿಕೆ

somanna-v
Published on

ಮೈಸೂರು: ಹೈಕಮಾಂಡ್ ಸೂಚನೆಯನ್ನು ತಲೆಯ ಮೇಲೆ ಹೊತ್ತು ದುಡಿಮೆ ಮಾಡಿದ ಮೇಲೆ ಯಾವ ರೀತಿ ನನಗೆ ಹೊಡೆತ ಆಯ್ತು ಎಂಬುದನ್ನು ಡಿಸೆಂಬರ್ 6ರ ಬಳಿಕ ಹೇಳ್ತಿನಿ ಎನ್ನುವ ಮೂಲಕ ಮಾಜಿ ಸಚಿವ ವಿ.ಸೋಮಣ್ಣ ಕುತೂಹಲ ಮೂಡಿಸಿದ್ದಾರೆ.


ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕದ ಕುರಿತು ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಡಿ. 6ರ ನಂತರ ನನ್ನ ಮನಸ್ಸಿನ ಭಾವನೆ ಹೇಳುತ್ತೇನೆ. ಅರವಿಂದ ಲಿಂಬಾವಳಿ ಹೇಳಿರುವ ಮಾತಿಗೆ ನನ್ನ ಸಮ್ಮತಿ ಇದೆ. ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆಯಂತಾಗಿದೆ. ಅದನ್ನು ವಿವರಿಸುತ್ತೇನೆ ಎಂದು ಹೇಳಿ ಅಚ್ಚರಿ ಮೂಡಿಸಿದರು.


ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ. ರಾಜಕಾರಣ ನಾಟಕ ಕಂಪನಿಯೂ ಅಲ್ಲ. ಒಳ ಒಪ್ಪಂದಕ್ಕೆ ಸಿಮೀತವಲ್ಲ ಎಂದು ಸೂಚ್ಯವಾಗಿ ನುಡಿದರು.


ಬಿ.ಎಸ್.ಯಡಿಯೂರಪ್ಪ ನಿಮ್ಮನ್ನು ಸಂಪರ್ಕಿಸಿದ್ದರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನೂ ಯಾರನ್ನೂ ಸಂಪರ್ಕಿಸಿಲ್ಲ. ಆ ತರದ ಯಾವ ಪ್ರಯತ್ನವೂ ನಡೆದಿಲ್ಲ ಎಂದು ಹೇಳಿದರು.

ಅಂತರ ಕಾಯ್ದುಕೊಂಡ ಸ್ಥಳೀಯ ಮುಖಂಡರು:

ವಿ.ಸೋಮಣ್ಣ ಅವರಿಂದ ನಗರದ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡರು. ಶಾಸಕ, ಸಂಸದ, ಮಾಜಿ ಶಾಸಕರು ಸೇರಿದಂತೆ ಬಿಜೆಪಿಯ ಯಾವುದೇ ಮುಖಂಡರೂ ಸೋಮಣ್ಣ ಅವರನ್ನು ಭೇಟಿ ಮಾಡಲಿಲ್ಲ. ಅವರ ಕಟ್ಟಾ ಬೆಂಬಲಿಗರನ್ನು ಬಿಟ್ಟರೆ ಬೇರೆ ಯಾರೂ ಸೋಮಣ್ಣ ಭೇಟಿಗೆ ಬಂದಿರಲಿಲ್ಲ. ಹೋಟೆಲ್‌ನಲ್ಲಿ ಆಪ್ತರೊಂದಿಗೆ ಮಾತುಕತೆ ನಡೆಸಿದ ಅವರು, ‘ಎಲ್ಲ ಒಳ ಒಪ್ಪಂದವಾಗಿದೆ. ಯಾರೂ ಆತುರ ಮಾಡ್ಕೋಬೇಡಿ’ ಎಂದು ಹೇಳಿ ಸಮಾಧಾನಪಡಿಸಿದರು. ತಮ್ಮ ಆಪ್ತರ ಜತೆ ಉಪಾಹಾರ ಸೇವನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net