ಜೀವನದಲ್ಲಿ ಕಷ್ಟಪಟ್ಟು ಯಶಸ್ಸುಗಳಿಸಬೇಕು:  ಡಾ.ಪುಷ್ಪಾ ಕುಟ್ಟಣ್ಣ

sibira
Published on

ಮಡಿಕೇರಿ: ಮಕ್ಕಳು ಜೀವನದಲ್ಲಿ ಕಷ್ಟಪಟ್ಟು ಸಿಕ್ಕುವ ಸೌಲಭ್ಯಗಳನ್ನು ಬಳಸಿಕೊಂಡು ಯಶಸ್ಸುಗಳಿಸಬೇಕೆಂದು ಅಂತರರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ್ತಿ, ಫೀ.ಮಾ. ಕಾರ್ಯಪ್ಪ ಕಾಲೇಜು ನಿವೃತ್ತ ಪ್ರಾಂಶುಪಾಲೆ ಡಾ.ಮಂಡೇಪಂಡ ಪುಷ್ಪ ಕುಟ್ಟಣ್ಣ ಕರೆ ನೀಡಿದರು.

ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಡಿಕೇರಿಯ ವಾಂಡರ್ಸ್‌ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್‌ಸ್ವಾಮಿ ಅವರ ಸ್ಮರಣಾರ್ಥ ಏರ್ಪಡಿಸಿಕೊಂಡು ಬದಲಾಗುತ್ತಿರುವ ೩೧ನೇ ವರ್ಷದ ಉಚಿತ ಬೇಸಿಗೆ ಶಿಬಿರದಲ್ಲಿ ಬುಧವಾರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದೆ ಕ್ರೀಡೆಯಾಗಲಿ, ಇನ್ನಿತರ ಯಾವುದೇ ಕ್ಷೇತ್ರಗಳಲ್ಲಿಯೂ ಅಭ್ಯಸಿಸಲು ಸೌಲಭ್ಯಗಳಿರಲಿಲ್ಲ. ಈಗಿನ ಮಕ್ಕಳು ಅದೃಷ್ಟವಂತರು. ಇಂತಹ ಶಿಬಿರಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಇದೊಂದು ವಿಭಿನ್ನ ಶಿಬಿರವಾಗಿದ್ದು, ಇಲ್ಲಿ ಅನೇಕ ವಿಷಯಗಳನ್ನು ಕಲಿಸಿಕೊಡುತ್ತಿರುವುದು ಶ್ಲಾಘನೀಯವಾದುದು. ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳೇ ತರಬೇತುದಾರರಾಗಿ ತೊಡಗಿಸಿಕೊಂಡು ಪ್ರೋತ್ಸಾಹ ನೀಡುತ್ತಿದ್ದಾರೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಮಕ್ಕಳಲ್ಲಿ ಶ್ರಮ, ಶಿಸ್ತು, ಸಂಯಮ, ತೊಡಗಿಸಿಕೊಳ್ಳುವಿಕೆ, ಅರ್ಪಣಾ ಮನೋಭಾವ ಇರಬೇಕು. ವಿದ್ಯಾಭ್ಯಾಸದೊಂದಿಗೆ ಕ್ರೀಡೆಯತ್ತಲೂ ಕೇಂದ್ರಿಕರಿಸಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಶಕ್ತಿ ಬರುತ್ತದೆ. ಭವಿಷ್ಯದಲ್ಲಿ ಅದು ಅರಿವಿಗೆ ಬರುತ್ತದೆ. ಎಲ್ಲ ಕ್ಷೇತ್ರಗಳಲ್ಲಿಯೂ ಕಷ್ಟ ಎಂಬುದು ಇರುತ್ತದೆ. ಕಷ್ಟವನ್ನು ಮೀರಿ ಉತ್ತಮ ವ್ಯಕ್ತಿತ್ವ ಹೊಂದಿಕೊಂಡು ಜೀವನ ರೂಪಿಸಿಕೊಳ್ಳಬೇಕೆಂದು ಹಿತ ನುಡಿಗಳನ್ನಾಡಿದರು. ಶಿಬಿರ ಧ್ಯೇಯವನ್ನು ಅರಿತು ಏಳಿಗೆಗೆ ಪ್ರಯತ್ನಿಸಬೇಕೆಂದು ಹೇಳಿದರು.

ಪತ್ರಕರ್ತ ಬಿ.ಜಿ.ಅನಂತಶಯನ ಮಾತನಾಡಿ, ಕೆಲವು ಮಕ್ಕಳು ಶಿಬಿರ ಮುಗಿದ ಬಳಿಕ ಅಭ್ಯಾಸವನ್ನೇ ಮರೆತು ಬಿಡುತ್ತಾರೆ. ಮೈದಾನಕ್ಕೆ ಬರುವುದಿಲ್ಲ. ನಿರಂತರ ಆಸಕ್ತಿ, ಪ್ರಯತ್ನದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವೆಂದು ಹೇಳಿದ ಅವರು, ಅಭ್ಯಾಸಗಳು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು. ಜೀವನ ಪರ್ಯಾಂತ ಇರಬೇಕು. ಮುಂದಿನ ಪೀಳಿಗೆಗೆ ಹೇಳಿಕೊಡುವಂತೆ ಇರಬೇಕು. ಪ್ರಥಮವಾಗಿ ಕಲಿಕೆಯಲ್ಲಿ ಏಕಾಗ್ರತೆ ಇರಬೇಕು. ದೇವರಲ್ಲಿ ನಂಬಿಕೆ ಇಡಬೇಕು. ದೇವರು ಅದ್ಭುತ ಶಕ್ತಿ ಎಂದು ಮನವರಿಕೆ ಮಾಡಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ವಾಂಡರ್ಸ್‌, ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಕೋಟೇರ ಎಂ.ಮುದ್ದಯ್ಯ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಬೇಕು. ಆ ನಿಟ್ಟಿನಲ್ಲಿ ವಾಂಡರ್ಸ್‌ ತಂಡ ಪ್ರಯತ್ನ ಮಾಡುತ್ತಿದೆ. ಶಿಬಿರದಲ್ಲಿ ಕಲತದ್ದನ್ನು ಮುಂದುವರಿಸಿಕೊಂಡು ಅಭಾಸ ಮಾಡಬೇಕು. ಇಲ್ಲಿ ಕಲಿತವರು ದೇಶಕ್ಕಾಗಿ ಆಡುವಂತಾಗಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ವಾಂಡರ್ಸ್‌ ಉಪಾಧ್ಯಕ್ಷ ಪಾರ್ಥ ಚಂಗಪ್ಪ, ಹಿರಿಯ ಕ್ರೀಡಾಪಟುಗಳು, ವಾಂಡರಸ್ ಕ್ಲಬ್‌ನ ಅಪ್ಪನೆರವಂಡ ಚುಮ್ಮಿ ದೇವಯ್ಯ, ಕೋಡಿಮಣಿಯಂಡ ಮೇದಪ್ಪ, ಮಣಿ ಮೇದಪ್ಪ, ಕಾರೇರ ಕವನ್ ಮಾದಪ್ಪ, ಆಸಿಫ್, ನಂದ, ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರಾದ ಕೋಟೇರ ನಾಣಯ್ಯ, ಕುಡೆಕಲ್ ಸಂತೋಷ್, ನಾಟೋಳಂಡ ಸುರೇಶ್, ಬಿದ್ದಂಡ ನರೆನ್, ಕೇನೇರ ಕಾವ್ಯ, ಪದಾಧಿಕಾರಿ ಬೊಪ್ಪಂಡ ಶ್ಯಾಂ ಪೂಣಚ್ಚ, ಪೋಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net