ತಂಗುದಾಣದೊಳಗೂ ಛತ್ರಿ ಹಿಡಿಯಬೇಕು!

jantra tangudana..
ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಬೆಳ್ಮಣ್‌ನ ಜಂತ್ರದಲ್ಲಿರುವ ಪ್ರಯಾಣಿಕರ ಬಸ್ ತಂಗುದಾಣ.
Published on

ಹರಿಪ್ರಸಾದ ನಂದಳಿಕೆ ಕಾರ್ಕಳ

ಬೆಳ್ಮಣ್‌ನಿಂದ ಶಿರ್ವ ಮಾರ್ಗವಾಗಿ ಉಡುಪಿಗೆ ಸಾಗುವ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಬೆಳ್ಮಣ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂತ್ರದಲ್ಲಿರುವ ಬಸ್ ತಂಗುದಾಣವೊಂದು ಹಲವು ವರ್ಷಗಳಿಂದಲೂ ಶಿಥಿಲಾವಸ್ಥೆಯಲ್ಲಿದೆ. ಮಳೆಗಾಲ ಆರಂಭವಾಗಿರುವುದರಿಂದ ಯಾವಾಗ ಬೇಕಾದರೂ ಕುಸಿಯುವ ಭೀತಿ ಎದುರಾಗಿದ್ದು, ಪ್ರಯಾಣಿಕರ ಪಾಲಿಗೆ ಯಮಸ್ವರೂಪವಾಗುವ ಅಪಾಯವಿದೆ.

ಮಳೆ, ಬಿಸಿಲಿಗೆ ಪ್ರಯಾಣಿಕರಿಗೆ ಆಸರೆಯಾಗಬೇಕಾದ ತಂಗುದಾಣ, ಮಳೆ ಬಂದಾಗ ಪ್ರಯಾಣಿಕರು ಇಲ್ಲಿ ಛತ್ರಿ ಹಿಡಿದು ನಿಲ್ಲುವಂಥ ಸ್ಥಿತಿಯಿದೆ. ನಿರಂತರ ಮಳೆ ಸುರಿದರೆ ತಂಗುದಾಣದೊಳಗೆ ನೀರು ಶೇಖರಣೆಯಾಗುತ್ತದೆ. ತೀರಾ ದುಸ್ಥಿತಿಯಲ್ಲಿರುವ ಜಂತ್ರದ ಪ್ರಯಾಣಿಕರ ತಂಗುದಾಣ ವಿದ್ಯಾರ್ಥಿಗಳು, ಪ್ರಯಾಣಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಮೇಲ್ಛಾವಣಿಯಲ್ಲಿ ಬಿರುಕು: ಬಹಳ ವರ್ಷಗಳ ಹಿಂದೆ ಈ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದು, ಸಂಪೂರ್ಣ ಶಿಥಿಲಗೊಂಡಿದೆ. ಮೇಲ್ಛಾವಣಿ ಹಾಳಾಗಿದ್ದು, ಸಿಮೆಂಟ್ ಹಾಗೂ ಕಾಂಕ್ರೀಟ್ ಅವಶೇಷಗಳು ಬೀಳುತ್ತಿವೆ. ಸಿಮೆಂಟ್ ಸ್ಲಾೃಬ್‌ಗಳು ಬೀಳಲು ಸಿದ್ಧವಾದಂತಿದ್ದು, ತಂಗುದಾಣದೊಳಗೆ ಪ್ರಯಾಣಿಕರು ನಿಲ್ಲುವುದು ತೀರಾ ಅಪಾಯಕಾರಿಯಾಗಿದೆ.

ಜಂತ್ರ, ಪುನಾರು, ಹಲಸಿನಕಟ್ಟೆ ಪ್ರದೇಶಗಳಿಗೆ ಇದುವೆ ಪ್ರಮುಖ ಬಸ್ ತಂಗುದಾಣವಾಗಿದ್ದು, ಅನಿವಾರ್ಯವಾಗಿ ಪ್ರಯಾಣಿಕರು ತಂಗುದಾಣದೊಳಗೇ ನಿಲ್ಲುತ್ತಿದ್ದಾರೆ.

ಗ್ರಾಮಸ್ಥರಿಂದ ಎಚ್ಚರಿಕೆ: ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳು ಇದೇ ಮಾರ್ಗವಾಗಿ ನಿತ್ಯವೂ ಸಂಚರಿಸುತ್ತಿದ್ದು, ಬಸ್ ತಂಗುದಾಣದ ದುಸ್ಥಿತಿ ಕುರಿತು ಅರಿವಿದ್ದರೂ ಪರಿಶೀಲಿಸಲು ಮುಂದಾಗುತ್ತಿಲ್ಲ. ಶೀಘ್ರವೇ ಜಂತ್ರ ಪ್ರದೇಶದಲ್ಲಿ ಹೊಸ ಬಸ್ ತಂಗುದಾಣ ನಿರ್ಮಿಸಿಕೊಡಬೇಕಿದ್ದು, ಈ ಕುರಿತು ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯಾಡಳಿತ ಗಮನ ಹರಿಸಬೇಕು. ಪ್ರಸ್ತುತ ಇರುವ ಶಿಥಿಲ ತಂಗುದಾಣದಿಂದ ಅನಾಹುತಗಳಾದರೆ ಅಧಿಕಾರಿಗಳು ಹಾಗೂ ಸ್ಥಳೀಯಾಡಳಿತವೇ ಹೊಣೆಯಾಗುತ್ತಾರೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಇಲ್ಲಿನ ಬಸ್ ತಂಗುದಾಣದ ಸಮಸ್ಯೆ ಬಹಳ ವರ್ಷಗಳಿಂದಲೂ ಇದೆ. ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಈ ತಂಗುದಾಣವನ್ನು ಈಗ ದುರಸ್ತಿಗೊಳಿಸುವಲ್ಲಿ ಅಧಿಕಾರಿಗಳು, ಸ್ಥಳೀಯಾಡಳಿತ ಆಸಕ್ತಿ ವಹಿಸಿಲ್ಲ. ಶಿಥಿಲಗೊಂಡಿರುವ ಈ ತಂಗುದಾಣ ಯಾವಾಗ ಬೇಕದರೂ ಕುಸಿಯುವ ಭೀತಿಯಿದೆ. - ರಂಜಿತ್, ಸ್ಥಳೀಯರು ಬಿಸಿಲು ಮಳೆಯಿಂದ ರಕ್ಷಿಸಿಕೊಳ್ಳಲು ಪ್ರಯಾಣಿಕರು ಬಸ್ ತಂಗುದಾಣ ಆಶ್ರಯಿಸುತ್ತಾರೆ. ಆದರೆ ಇಲ್ಲಿ ತಂಗುದಾಣ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಪ್ರಯಾಣಿಕರು ರಕ್ಷಿಸುವವರು ಯಾರು ಎಂಬ ಆತಂಕ ಕಾಡಲಾರಂಭಿಸಿದೆ. - ಸುರೇಶ್ ಆಚಾರ್ಯ, ಗ್ರಾಮಸ್ಥರು ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ಗೆ ಕಾಯುವ ಸಂದರ್ಭ ಇದೇ ತಂಗುದಾಣ ಆಶ್ರಯಿಸುತ್ತಿದ್ದು, ಇದರೊಳಗೆ ಅವರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಸಿಮೆಂಟ್ ಸ್ಲಾೃಬ್‌ಗಳು ಕಿತ್ತುಹೋಗಿದ್ದು, ಕಬ್ಬಿಣದ ರಾಡುಗಳು ತುಕ್ಕು ಹಿಡಿದು ಬೀಳುತ್ತಿವೆ. ದೊಡ್ದ ದುರಂತ ನಡೆಯುವ ಮೊದಲೇ ಸ್ಥಳೀಯ ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕು. ಆಶಾಲತಾ, ಸ್ಥಳೀಯ ನಿವಾಸಿ https://www.vijayavani.net/state-level-award-for-vasanthi-r-nayak https://www.vijayavani.net/india-is-strong-because-of-its-youth-power

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net