ಉಚಿತ ಪಡಿತರಕ್ಕೆ 10 ಕಿ.ಮೀ. ಅಲೆಯಬೇಕು!

290119 Ration Card Rice Capture
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ ಅನ್ನಭಾಗ್ಯ ಯೋಜನೆಯಡಿ ಸರ್ಕಾರಿ ಉಚಿತವಾಗಿ ಅಕ್ಕಿ ನೀಡುತ್ತಿದೆ. ಆದರೆ ಈ ಅಕ್ಕಿಯನ್ನು ಮನೆಗೆ ತೆಗೆದುಕೊಂಡು ಬರಲು ದೂರದ ನ್ಯಾಯಬೆಲೆ ಹೋಗಿ ಬರಲು 150 ರೂ. ಖರ್ಚು ಮಾಡಬೇಕಾದ ಪರಿಸ್ಥಿತಿ ಕೊಕ್ಕರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರ್ಲಾಳಿ ಭಾಗದ ಫಲಾನುಭವಿಗಳದ್ದು. ಹೊರ್ಲಾಳಿಯಲ್ಲಿ 250ಕ್ಕೂ ಅಧಿಕ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಹೊಂದಿವೆ. ಬಹುತೇಕ ಕುಟುಂಬಗಳು ಕೂಲಿ ಹಾಗೂ ಕೃಷಿಯನ್ನೇ ನಂಬಿಕೊಂಡಿದ್ದು, ಇಲ್ಲಿ ಸ್ಥಳೀಯ ನ್ಯಾಯಬೆಲೆ ಅಂಗಡಿ ಇಲ್ಲ. ಹೀಗಾಗಿ ಪಡಿತರ ಪಡೆಯಲು 10 ಕಿ.ಮೀ. ದೂರದಲ್ಲಿರುವ ಕೊಕ್ಕರ್ಣೆಯ ಸಿಂಡಿಕೇಟ್ ರೈತರ ಸಹಕಾರಿ ಸಂಕ್ಕೆ ಬರಬೇಕು. ಹೊರ್ಲಾಳಿಯಲ್ಲೇ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಜನ ಆಗ್ರಹಿಸುತ್ತಿದ್ದಾರೆ.

ದಿನಪೂರ್ತಿ ಹಾಳು

ಹೊರ್ಲಾಳಿಯ ಜನರು ಪಡಿತರ ಪಡೆದುಕೊಳ್ಳಲು ಬೆಳಗ್ಗೆಯೇ ಬಂದು ಸಾಲು ನಿಲ್ಲಬೇಕು. ಪಡಿತರ ಪಡೆದು ವಾಪಸ್ ಮನೆಗೆ ತಲುಪುವ ವೇಳೆ ಮಧ್ಯಾಹ್ನವಾಗುವುದರಿಂದ ಆ ದಿನ ಕೆಲಸಕ್ಕೂ ಹೋಗಲಾಗುವುದಿಲ್ಲ. ಇದರಿಂದ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಕಂದಾಯ ಭೂಮಿ ಇದೆ

ಈ ಪ್ರದೇಶದಲ್ಲಿ ಬೇಕಾದಷ್ಟು ಕಂದಾಯ ಭೂಮಿಯಿದೆ. ಹಾಗಾಗಿ ನೂತನ ನ್ಯಾಯಬೆಲೆ ಅಂಗಡಿಯನ್ನು ಇಲ್ಲೇ ಆರಂಭಿಸಬೇಕೆಂದು ಗ್ರಾಮಸಭೆಯಲ್ಲಿ ಆಗ್ರಹಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಯನ್ನು ಕೂಡಲೇ ವಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೂಕ್ತವಾದ ಬಸ್ ವ್ಯವಸ್ಥೆಯೇ ಇಲ್ಲ

ದುರಾದೃಷ್ಟವೆಂದರೆ ಹೊರ್ಲಾಳಿ, ಬಿಯಾಳಿ, ಕುದಿ ಗ್ರಾಮಕ್ಕೆ ಯಾವುದೇ ಬಸ್ ಸಂಚರಿಸುವುದಿಲ್ಲ. ಇದರ ಪರಿಣಾಮ ಎಲ್ಲರೂ ದ್ವಿಚಕ್ರ ವಾಹನ ಹಾಗೂ ರಿಕ್ಷಾಗಳನ್ನೇ ಆಶ್ರಯಿಸಬೇಕಾಗಿದೆ. ಮುದ್ದೂರು ಭಾಗದಲ್ಲಿ ನಿಯಮಿತ ಬಸ್ ವ್ಯವಸ್ಥೆ ಇದ್ದರೂ ಹೊರ್ಲಾಳಿಯಿಂದ 3 ಕಿಲೋ ಮೀಟರ್ ದೂರ ಬರಬೇಕಿದೆ. ಹಾಗಾಗಿ ಉಡುಪಿ, ಮಣಿಪಾಲ, ಮಂಗಳೂರು ಮುಂತಾದ ಕಡೆಗಳಿಗೆ ತೆರಳುವವರು ತೊಂದರೆ ಅನುಭವಿಸುತ್ತಿದ್ದಾರೆ.

ಪಡಿತರ ಪಡೆಯಲು ಹೊರ್ಲಾಳಿಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಸರ್ಕಾರಿ ಜಾಗ ಲಭ್ಯವಿದೆ. ಸರ್ಕಾರ ಇಲ್ಲಿಯೇ ನ್ಯಾಯಬೆಲೆ ಅಂಗಡಿ ತೆರೆದರೆ ಈ ಭಾಗದ ಕೂಲಿಕಾರ್ಮಿಕರು, ಜನರಿಗೆ ತುಂಬಾ ಅನುಕೂಲವಾಗಲಿದೆ. ಸರ್ಕಾರಿ ಬಸ್ ಸೌಲಭ್ಯವನ್ನೂ ಕಲ್ಪಿಸಬೇಕಿದೆ. ನರಸಿಂಹ ಪೂಜಾರಿ, ಕೊಕ್ಕರ್ಣೆ ಗ್ರಾಮ ಪಂಚಾಯಿತಿ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net