

ಮೈಸೂರು: "ವಿದ್ಯಾರ್ಥಿಗಳು ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕೆ ಹೊರತು ಬೇರೆ ಯಾರೋ ಬಂದು ನಿಮ್ಮನ್ನು ಉದ್ಧಾರ ಮಾಡುವುದಿಲ್ಲ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದು ಮಂಡ್ಯದ ಜಿಎಫ್‌ಜಿಸಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ. ಎಂ.ಪ್ರಸನ್ನ ಕುಮಾರ್ ತಿಳಿಸಿದರು.
ರಾಘವೇಂದ್ರ ನಗರದಲ್ಲಿರುವ ಶ್ರೀಮತಿ ಇಂದಿರಾ ಗಾಂಧಿ ಮೆಟ್ರಿಕ್ ನಂತರದ ಮಹಿಳಾ ನರ್ಸಿಂಗ್ ವಿದ್ಯಾರ್ಥಿನಿಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಸಹ ಹಾಸ್ಟೆಲ್ ವಿದ್ಯಾಥಿಯಾಗಿದ್ದೆ. ನನಗೆ ನಿಜವಾದ ಬದುಕನ್ನು ಕಟ್ಟಿಕೊಟ್ಟದ್ದು ಹಾಸ್ಟೆಲ್. ದೇಶದಲ್ಲಿ ಶೇ.28ರಷ್ಟು ವಿದ್ಯಾರ್ಥಿಗಳು ಶೇ. 19 ವಿದ್ಯಾರ್ಥಿನಿಯರು ಹಾಸ್ಟೆಲ್‌ಗಳಲ್ಲಿ ವಿದ್ಯಾಭ್ಯಾಸ ಮಾಡುತಿದ್ದಾರೆ ಎಂದರು.
ಹಾಸ್ಟೆಲ್ ನಿರ್ಮಾಣಕ್ಕೆ ನೆರವಾದವರನ್ನು ನಾವು ನೆನಪಿಸಿಕೊಳ್ಳಬೇಕು. ನಿಮ್ಮ ಏಳಿಗೆಗೆ ಎಷ್ಟು ಜನ ಶ್ರಮಿಸುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಂಡು ನಿಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳುವುದೇ ಇಲಾಖೆಗೆ ತೀರಿಸುವ ಋಣ ಎಂದು ಹೇಳಿದರು.
ಮೇ 12ರಂದು ವಿಶ್ವ ದಾದಿಯರ ದಿನವನ್ನು ಆಚರಿಸುತ್ತಾರೆ. ಆರೋಗ್ಯ ಕ್ಷೇತ್ರದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ವಿಶೇಷ ವ್ಯಕ್ತಿಯಾಗಿದ್ದಾರೆ. ವೃತ್ತಿಯ ಬಗ್ಗೆ ಅವರಿಗೆ ಬಹಳ ಗೌರವವಿತ್ತು, ನೀವು ಚೆನ್ನಾಗಿ ಓದಿಕೊಂಡು ಧನಾತ್ಮಕವಾದ ನಂಬಿಕೆ ಇಟ್ಟುಕೊಂಡು ನಿಮ್ಮ ಭವಿಷ್ಯದ ಬದುಕನ್ನು ಕಲ್ಪನೆ ಮಾಡಿಕೊಂಡು ಕನಸುಗಳನ್ನು ಕಟ್ಟಿಕೊಂಡು ಗುರಿ ಸಾಧಿಸಲು ಪ್ರಯತ್ನಿಸಿರಿ, ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿಮ್ಮ ಮಕ್ಕಳು ನಿಮ್ಮನ್ನು ಹೊಗಳುವ ಹಾಗೆ ಬದುಕಿರಿ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಸುಜೇಂದ್ರಕುಮಾರ್ ಮಾತನಾಡಿ, ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ನಿಮಗೆ ಎಲ್ಲ ವ್ಯವಸ್ಥೆ ಮಾಡಿದೆ, ಮೊಬೈಲ್‌ನಿಂದ ದೂರವಿದ್ದು ಚೆನ್ನಾಗಿ ಓದಿ ತಂದೆ, ತಾಯಿಗೆ ಒಳ್ಳೆಯ ಹೆಸರನ್ನು ತಂದು ನಿಮ್ಮ ಜೀವನವನ್ನು ನೀವು ರೂಪಿಸಿಕೊಳ್ಳಬೆಕು ಎಂದರು.
ಸಹಾಯಕ ಪ್ರಾಧ್ಯಾಪಕಿ ರೇಖಾ ಬಿ.ಪುನಿತ್, ನಿಲಯ ಪಾಲಕರಾದ ಲೀಲಾ, ನಾಗರತ್ನಾ, ರಾಜಮ್ಮ ಇದ್ದರು. ಬಳಿಕ ವಿದ್ಯಾಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.