

Bengaluru: ದುಷ್ಟಶಕ್ತಿಯನ್ನು ಓಡಿಸುತ್ತೇನೆ ಎಂದು ಜ್ಯೋತಿಷಿಯೊಬ್ಬ 33 ವರ್ಷದ ಮಹಿಳೆಯಿಂದ ಐದು ಲಕ್ಷ ರೂ. ಪಡೆದು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಭೂತಿಪುರದ ನಿವಾಸಿಯಾಗಿರುವ ಮಹಿಳೆ ಡಿಸೆಂಬರ್ 2023ರಲ್ಲಿ ಅಜೀರ್ಣ ಮತ್ತು ಕೈ ಮತ್ತು ಕಾಲುಗಳಲ್ಲಿ ಊತ ಸೇರಿದಂತೆ ಆಗಾಗ್ಗೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾಗ ಅವಳ ಸ್ನೇಹಿತರೊಬ್ಬರು ಒಬ್ಬ ಜ್ಯೋತಿಷಿಯನ್ನು ಪರಿಚಯಿಸಿದ್ದಾರೆ. ಜ್ಯೋತಿಷಿ ಆಕೆಗೆ 15 ದುಷ್ಟಶಕ್ತಿಗಳು ಕಾಡುತ್ತಿವೆ ಎಂದು ಹೇಳಿ, ಆಧ್ಯಾತ್ಮಿಕ ಆಚರಣೆಗಳ ಮೂಲಕ ಆ ದುಷ್ಟಶಕ್ತಿಯನ್ನು ಓಡಿಸುವುದಾಗಿ ಹೇಳಿ ಮಹಿಳೆಯಿಂದ ಜಾತಕ ಮತ್ತು ಫೋಟೋಗಳ ಜೊತೆ ಆನ್ಲೈನ್ ಮೂಲಕ ಹಣ ಪಾವತಿಸಿಕೊಂಡಿದ್ದಾನೆ. ಮೊದಲಿಗೆ ಮಹಿಳೆ ಜ್ಯೋತಿಷಿಗೆ 150 ರೂ., 151 ರೂ. ವರ್ಗಾವಣೆ ಮಾಡಿದ್ದಾರೆ. ನಂತರ 1 ಲಕ್ಷ ರೂ. ನಗದು ರೂಪದಲ್ಲಿ ನೀಡುವುದರ ಜೊತೆಗೆ ಆನ್ಲೈನ್ನಲ್ಲಿ ಸುಮಾರು 4.2 ಲಕ್ಷ ರೂ. ವರ್ಗಾಯಿಸಿದ್ದಾಳೆ.
ಕೋರಮಂಗಲದ ಹೋಟೆಲ್‌ನಲ್ಲಿ ಸೆಪ್ಟೆಂಬರ್ 29, 2024 ರಂದು ಜ್ಯೋತಿಷಿ ಪೂಜಾ ಕಾರ್ಯಕ್ರಮ ನಡೆಸಿದ್ದಾನೆ. ಪೂಜೆ ಮಾಡುವ ವಿಧಾನದಲ್ಲಿ ನಿಂಬೆಹಣ್ಣುಗಳನ್ನು ಕತ್ತರಿಸುವುದು, ಧೂಪವನ್ನು ಸುಡುವುದು, ಮಹಿಳೆಯ ಮುಖಕ್ಕೆ ಬೂದಿ ಎರಚಿದ್ದಾನೆ. ನಂತರ ಮಹಿಳೆಗೆ ನವಿಲು ಗರಿಗಳಿಂದ ಹೊಡೆಯುವುದು, ಅವಳ ಕೂದಲನ್ನು ಹಿಡಿದು "ಆತ್ಮ, ದೂರ ಹೋಗು" ಎಂದು ಪದೇ ಪದೇ ಜೋರಾಗಿ ಜಪಿಸಿ ಕಿರುಚಿದ್ದಾನೆ. ಪೂಜೆ ಮುಗಿದ ನಂತರ ದುಷ್ಟಶಕ್ತಿಗಳು ನಿಮ್ಮನ್ನು ಬಿಟ್ಟು ಹೋದವು ಎಂದಿದ್ದಾನೆ. ಜೊತೆಗೆ ಅದೇ ದಿನ, ಜ್ಯೋತಿಷಿಯು ಇದೇ ರೀತಿಯ 'ಚಿಕಿತ್ಸೆ' ಪಡೆಯಲು ಬಯಸುತ್ತಿದ್ದ ಮಹಿಳೆಯ ಇಬ್ಬರು ಸ್ನೇಹಿತರಿಂದ ತಲಾ 65,000 ರೂ. ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಪೂಜೆಗಳ ನಂತರವೂ ಮಹಿಳೆಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹೀಗಾಗಿ ಮಹಿಳೆ ಹಣ ಮರುಪಾವತಿ ಕೇಳಿದಾಗ, ಜ್ಯೋತಿಷಿ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ಅವರನ್ನು ಸಂಪರ್ಕಿಸಲು ಮಹಿಳೆಯ ಪ್ರಯತ್ನ ವಿಫಲವಾದ ನಂತರ ಅವಳೂ ಪೊಲೀಸರಿಗೆ ದೂರು ನೀಡಿದ್ದಾಳೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ವಂಚನೆಗಾಗಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 318ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)