ದೇವೇಗೌಡರ ಕುಟುಂಬ ಭೂ ಕಬಳಿಕೆ ಬಗ್ಗೆ ಬಿಜೆಪಿ ಜಾಹೀರಾತು ಕೊಟ್ಟಿದ್ದೀರಿ

g parameshwara
Published on


ಮೈಸೂರು: ದೇವೇಗೌಡರ ಕುಟುಂಬ ಭೂ ಕಬಳಿಕೆ ಮಾಡಿರುವ ಬಗ್ಗೆ ನೀವೇ (ಬಿಜೆಪಿ) ಜಾಹೀರಾತು ಕೊಟ್ಟಿದ್ದೀರಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕುಟುಕಿದರು.


ದೇವೇಗೌಡರ ಕುಟುಂಬದ ಭೂ ಕಬಳಿಕೆ ಜಾಹೀರಾತು ವಿಚಾರ ಪ್ರಸ್ತಾಪಿಸಿದ ಅವರು, ಕುಮಾರಸ್ವಾಮಿಗೆ ಮತ್ತೊಬ್ಬರ ಬಗ್ಗೆ ಮಾತನಾಡುವ ನೈತಿಕತೆ ಬಗ್ಗೆ ಬಿಜೆಪಿಯವರೇ ಪ್ರಶ್ನಿಸಿದ್ದಾರೆ ಎಂದು ತಿಳಿಸಿದರು.


ಪಾದಯಾತ್ರೆ ಮಾಡೋದು ನಿಮ್ಮ ಹಕ್ಕು. ಆದರೆ, ಯಾವ ಕಾರಣಕ್ಕೆ ನಿಮ್ಮ ಹೋರಾಟ ಎಂಬುದನ್ನು ತಿಳಿಸಿ. ನಾವು ಜನರ ಅಭಿವೃದ್ಧಿ, ನಾಡಿನ ಒಳಿತಿಗಾಗಿ ಅನೇಕ ಪಾದಯಾತ್ರೆಗಳನ್ನು ಮಾಡಿದ್ದೇವೆ. ಸಿಎಂ ವಿರುದ್ಧ ಆರೋಪ ಮಾಡಲಿಕ್ಕೆ ನಿಮ್ಮಲ್ಲಿ ದಾಖಲಾತಿ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.


ಬಿಜೆಪಿ- ಜೆಡಿಎಸ್ ಪಕ್ಷದವರು ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದಾರೆ. ಪ್ರತಿಪಕ್ಷಗಳ ಪಾದಯಾತ್ರೆ ಕ್ಷುಲ್ಲಕ ಕಾರಣಕ್ಕಾಗಿ ನಡೆದಿದೆ. ನಿಮ್ಮ ವಿರುದ್ಧ 25 ಹಗರಣಗಳಿವೆ ಎಂದು ವಾಗ್ದಾಳಿ ನಡೆಸಿದರು.


ವಾಲ್ಮೀಕಿ ನಿಗಮದ ಹಗರಣ ಹೊರಬಂದ ನಂತರ ನಾವೇ ಕ್ರಮ ತೆಗೆದುಕೊಂಡಿದ್ದು. ಆದರೂ ಬಿಜೆಪಿಯವರು ಸಿಬಿಐ, ಇಡಿ ದುರುಪಯೋಗ ಮಾಡಿಕೊಂಡು ಸವಾರಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


5,100 ಕೋಟಿ ರೂ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಜಿಎಸ್‌ಟಿ, ತೆರಿಗೆ ಹಣ, ಅತಿವೃಷ್ಟಿ ಪರಿಹಾರವನ್ನೂ ಕೊಡಲಿಲ್ಲ. ಸುಪ್ರೀಂಕೋರ್ಟ್ ಚಾಟಿ ಬೀಸಿದ ಬಳಿಕ ಕೊಟ್ಟಿದ್ದಾರೆ. ಇದು ಕರ್ನಾಟಕದ ಮಟ್ಟಿಗೆ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net