ಒಗ್ಗಟ್ಟಿದ್ದರೆ ಮಾತ್ರ ಸವಲತ್ತು ಪಡೆಯಲು ಸಾಧ್ಯ

h21-Devanga 2
Published on

ಹುಬ್ಬಳ್ಳಿ: ದೇವಾಂಗ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಸ್ವಾರ್ಥ ಬಿಟ್ಟು ಸಮಾಜದ ಸಂಘಟನೆಯಲ್ಲಿ ತೊಡಗಬೇಕು. ಒಗ್ಗಟ್ಟಿನಿಂದ ಮಾತ್ರ ಎಲ್ಲ ಸೌಲಭ್ಯ ಪಡೆಯಲು ಸಾಧ್ಯ ಎಂದು ಹಂಪಿ ಹೇಮಕೂಟದ ಶ್ರೀ ಗಾಯತ್ರಿಪೀಠದ ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿ ಹೇಳಿದರು.
ಧಾರವಾಡ ಜಿಲ್ಲಾ ದೇವಾಂಗ ಸೇವಾ ಸಂಘ, ದೇವಾಂಗ ಮಹಿಳಾ ಸಂಘ, ದೇವಾಂಗ ಯುವಕ ಸಂಘದ ಆಶ್ರಯದಲ್ಲಿ ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಗುರುವಂದನಾ ಹಾಗೂ ಸಿಂಹಾಸನ ಅರ್ಪಣೆ, ಅಕ್ಷರಾಭ್ಯಾಸ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗುರುಕೃಪೆ ಬಹಳ ಮಹತ್ವದ್ದು. ಹುಬ್ಬಳ್ಳಿಯಲ್ಲಿ ಇಂಥ ಕಾರ್ಯಕ್ರಮ ಮಾಡಿದ್ದು, ಸಂತೋಷ ತಂದಿದೆ. ಸಮಾಜದಲ್ಲಿ ಪ್ರತಿಭೆಗಳು ಸಾಕಷ್ಟಿವೆ. ಅವುಗಳನ್ನು ಬೆಳಕಿಗೆ ತರುವ ಕಾರ್ಯವಾಗಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿ, ದೇವಾಂಗ ಸಮಾಜ ಬಟ್ಟೆ ಕೊಟ್ಟು ನಾಗರಿಕತೆಯ ಅರಿವು ಮೂಡಿಸಿದೆ. ಕಾಯಕವೇ ಕೈಲಾಸ ಎಂಬುದನ್ನು ಅಕ್ಷರಶಃ ಪಾಲಿಸುತ್ತಿರುವ ಸಮಾಜವಿದು. ದೇವಾಂಗ ಸಮಾಜವು ಕಳೆದ ವರ್ಷದಿಂದ ನಗರದಲ್ಲಿ ಸಿಎ ನಿವೇಶನಕ್ಕೆ ಬೇಡಿಕೆ ಇಟ್ಟಿದೆ. ಈ ಬಾರಿ 50 ಸಿಎ ನಿವೇಶನಗಳು ಬಂದಿವೆ. ಅದರಲ್ಲಿ ದೇವಾಂಗ ಸಮಾಜಕ್ಕೆ ಒಂದು ನಿವೇಶನ ನೀಡುತ್ತೇವೆ ಎಂದು ಭರವಸೆ ನೀಡಿದರು.
ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀನಿವಾಸ ಬಳ್ಳಿ ಮಾತನಾಡಿ, ಇಡೀ ಜಗತ್ತು ಅನುಸರಿಸಬೇಕಾದ ಗುರುಪರಂಪರೆ ನಮ್ಮ ದೇಶದಲ್ಲಿದೆ. ಗುರುಪೌರ್ಣಿಮೆಯನ್ನು ಅರ್ಥಪೂರ್ಣವಾಗಿ ದೇವಾಂಗ ಸಮಾಜ ಆಚರಿಸುತ್ತಿರುವುದು ವಿಶೇಷವಾಗಿದೆ ಎಂದರು.
ಇದೇ ವೇಳೆ ಚಿಕ್ಕಮಕ್ಕಳಿಗೆ ಅಕ್ಷರಾಭ್ಯಾಸ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಜಿ. ಬ್ಯಾಕೋಡಿ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ, ಯುವಕ ಸಂಘದ ಅಧ್ಯಕ್ಷ ವಿನೋದ ಜವಳಿ, ಶ್ರೀಧರ ಹುಬ್ಬಳ್ಳಿಕರ, ರವೀಂದ್ರ ಪಾಟೀಲ, ಬಸವರಾಜ ಬೋರಣ್ಣವರ, ಎನ್.ಜಿ. ಭಾಪ್ರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net