ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸಲಹೆ

Yogotsava at Police Parade Ground Mandya
Published on

ಮಂಡ್ಯ: ಪ್ರತಿದಿನ ಯೋಗಾಭ್ಯಾಸವನ್ನು ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸಲಹೆ ನೀಡಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಯೋಗೋತ್ಸವದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆಯುತ್ತಿರುವ ಯೋಗೋತ್ಸವದಲ್ಲಿ ಇಲಾಖೆಯ 300 ಜನ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಮಾತ್ರವಲ್ಲದೆ ಯೋಗಾಭ್ಯಾಸ ಮಾಡಿದ್ದು ಬಹಳ ಖುಷಿಯಾಯಿತು. ಇದೇ ರೀತಿ ಪ್ರತಿದಿನ ಕೂಡ ಯೋಗಾಭ್ಯಾಸವನ್ನು ಮಾಡಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇನ್ನೂ ಹೆಚ್ಚಿನ ಸಾರ್ವಜನಿಕರು ಯೋಗಾಭ್ಯಾಸವನ್ನು ಮಾಡಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಹೇಳಿದರು.

ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮೀ ಮಾತನಾಡಿ, ದಿನನಿತ್ಯದ ಜೀವನದಲ್ಲಿ ಸುಮಾರು ಜನರು ನೀರನ್ನು ಬಹಳ ಕಡಿಮೆ ಕುಡಿಯುತ್ತಾರೆ. ಇದರಿಂದ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತವೆ. ನೀರು ಕಡಿಮೆ ಕುಡಿಯುವುದರಿಂದ ಕಿಡ್ನಿಯಲ್ಲಿ ಸ್ಟೋನ್, ತೊಂದರೆ, ಸುಸ್ತು, ಆಯಾಸ ಮತ್ತು ಚರ್ಮದ ತೊಂದರೆಗಳು ಉಂಟಾಗುತ್ತದೆ. ಆದ್ದರಿಂದ ಒಂದು ಹೊತ್ತು ಊಟ ಕಡಿಮೆ ಮಾಡಿದರೂ ಕೂಡ ಹೆಚ್ಚಾಗಿ ನೀರು ಕುಡಿಯಬೇಕು ಎಂದರು.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರೆ ನಮ್ಮ ದಿನನಿತ್ಯ ಆಹಾರದ ಪದ್ಧತಿಯಲ್ಲಿ ಹೆಚ್ಚಾಗಿ ನೀರು ಕುಡಿಯುವ ಅಭ್ಯಾಸ, ಹಸಿ ತರಕಾರಿ, ಹಣ್ಣು ಹಂಪಲು, ಮೊಳಕೆ ಕಟ್ಟಿದ ಕಾಳುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಮಾಂಸಾಹಾರ ಸೇವನೆ ಮಾಡುವುದು ತಪ್ಪಲ್ಲ. ಆದರೆ ಪ್ರತಿದಿನ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ ಎಂದು ಹೇಳಿದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ-1 ಸಿ.ಇ.ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net