

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ.
ಜಿಪಂ ಸದಸ್ಯ ಯೋಗೀಶ್ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ ವಿಜಯಪುರದಲ್ಲಿ ಸಿಬಿಐ ಪೊಲೀಸರು ಚಂದ್ರಶೇಖರ ಇಂಡಿಯನ್ನ ವಶಕ್ಕೆ ಪಡೆದಿದ್ದರು. ಭಾನುವಾರ ಧಾರವಾಡಕ್ಕೆ ಕರೆತಂದಿದ್ದಾರೆ. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಧೀಶರ ಗೃಹ ಕಚೇರಿಗೆ ಹಾಜರುಪಡಿಸಿದರು.
ಯೋಗೀಶ್ಗೌಡರ ಹತ್ಯೆಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪ ಇವರ ಮೇಲಿದೆ ಎನ್ನಲಾಗಿದ್ದು, ಈ ಸಂಬಂಧ ಇವರನ್ನು 5-6 ಬಾರಿ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಅಕ್ರಮ ಶಸ್ತ್ರಾಸ್ತ್ರವನ್ನು ಭೀಮಾ ತೀರದಿಂದ ಸಂಗ್ರಹಿಸಲಾಗಿತ್ತು ಎಂದು ತಿಳಿದುಬಂದಿದೆ. ಸಿಬಿಐ ಪೊಲೀಸರಿಂದ ನ.5ರಂದು ಬಂಧನಕ್ಕೊಳಪಟ್ಟಿದ್ದ ವಿನಯ್ ಕುಲಕರ್ಣಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.