

ಗೋಕರ್ಣ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಮಂಗಳವಾರ ಇಲ್ಲಿನ ಪುರಾಣ ಖ್ಯಾತ ಶ್ರೀ ಲಕ್ಷ್ಮೀ ವೆಂಕಟೇಶ ಮಂದಿರದಲ್ಲಿ ಮೊಸರು ಗಡಿಗೆ ಆಚರಣೆ ನಡೆಯಿತು. ಇದೇ ವೇಳೆ ಮಂದಿರದಲ್ಲಿ ಆಯೋಜಿಸಿದ್ದ ಭಜನಾ ಸಪ್ತಾಹದ ಮಂಗಳ ನಿಮಿತ್ತ ಓಕುಳಿ ಸಂಪ್ರೋಕ್ಷಣೆ ಮತ್ತು ಸಾಮೂಹಿಕ ವಂದನಾ ಕಾರ್ಯಕ್ರಮ ನೂರಾರು ಭಕ್ತರು ಭಾಗವಹಿಸುವ ಮೂಲಕ ಸಂಪನ್ನವಾಯಿತು. ಉತ್ಸವ ನಿಮಿತ್ತ ಮಂದಿರದ ಎದುರು ವಿಶೇಷವಾದ ತಳಿರು-ತೋರಣ ನಿರ್ವಿುಸಿ ವಿವಿಧ ಫಲಾವಳಿಗಳಿಂದ ಅಲಂಕರಿಸಲಾಗಿತ್ತು. ಮೊಸರು ಗಡಿಗೆ ತರುವಾಯ ಭಕ್ತರು ವಿವಿಧ ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ವಿವಿಧ ಮಂದಿರಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದರು.
ರಾತ್ರಿ ಆಚರಣೆ: ಮಂದಿರದಲ್ಲಿ ಸೋಮವಾರ ಮಧ್ಯರಾತ್ರಿ ಸೇರಿದ ಅಪಾರ ಭಕ್ತರು ಶ್ರೀ ಕೃಷ್ಣ ಜನನವನ್ನು ಸಾಂಪ್ರದಾಯಿಕವಾಗಿ ಆಚರಿಸಿದರು. ಸುಮಂಗಲೆಯರು ಬೆಳ್ಳಿಯ ತೊಟ್ಟಿಲಲ್ಲಿ ಬಾಲಕೃಷ್ಣಮೂರ್ತಿಯನ್ನು ತೂಗಿ ಜೋಗುಳ ಹಾಡಿ ಶ್ರೀಕೃಷ್ಣ ಭಜನೆ ಕೈಗೊಂಡರು. ನಂತರ ಸಾಮೂಹಿಕ ಪ್ರಸಾದ ವಿತರಣೆ ನಡೆಯಿತು. ಮಂಗಳವಾರ ಸಂಜೆ ಶ್ರೀಮಹಾಬಲೇಶ್ವರ ಮಂದಿರದ ವಿಶೇಷ ಉತ್ಸವ ಶ್ರೀ ಗೋಪಾಲಕೃಷ್ಣ ಮಂದಿರಕ್ಕೆ ಭೇಟಿ ನೀಡಿ ಅಷ್ಟಾವಧಾನ ಸೇವೆ ಸ್ವೀಕರಿಸಿತು.