

ಬೆಂಗಳೂರು: ಸಚಿವ ಸಂಪುಟ ಸೇರಲು ಪ್ರಯತ್ನ ನಡೆಸಿರುವ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಬಿಜೆಪಿ ಶಾಸಕರ ಆಕ್ರೋಶ ಸ್ಪೋಟಗೊಂಡಿದೆ. 2 ದಿನದಿಂದ ಬಿಜೆಪಿ ಶಾಸಕರು ಸಭೆಗಳನ್ನು ನಡೆಸುತ್ತಿದ್ದು, ಯೋಗೇಶ್ವರ್ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದೆಂದು ಪಕ್ಷದ ಮುಖಂಡರ ಮೇಲೆ ಒತ್ತಡ ತರುತ್ತಿದ್ದಾರೆ.
ಯೋಗೇಶ್ವರ್ ಇತ್ತೀಚೆಗೆ ಮೂರು ಬಾರಿ ದೆಹಲಿಗೆ ಹೋಗಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಇತರರನ್ನು ಭೇಟಿ ಮಾಡಿ ಸಂಪುಟಕ್ಕೆ ಸೇರಿಸುವಂತೆ ಒತ್ತಡ ತಂದಿದ್ದರು. ಆದರೆ ಪಕ್ಷದ ಅನೇಕ ಶಾಸಕರು ಯೋಗೇಶ್ವರ್ ಕೊಡುಗೆ ಪಕ್ಷಕ್ಕೆ ಏನೇನೂ ಇಲ್ಲ, ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಅವರನ್ನು ಮೇಲ್ಮನೆಗೆ ನಾಮಕರಣ ಮಾಡಿದ್ದೇ ದೊಡ್ಡದಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಕರೆತರುವಲ್ಲಿ ಯೋಗೇಶ್ವರ್ ಪಾತ್ರ ಏನೂ ಇಲ್ಲ.
ಆದ್ದರಿಂದ ಯೋಗೇಶ್ವರ್ ಪಕ್ಷಕ್ಕೆ ಅನಿವಾರ್ಯವೂ ಅಲ್ಲ. ಆಪರೇಷನ್ ಕಮಲದ ಹೆಸರಿನಲ್ಲಿ ಕೆಲ ಅಕ್ರಮ ನಡೆಸಿದ್ದಾರೆಂಬ ದೂರುಗಳಿವೆ. ಅಂತಹವರಿಗೆ ಸಂಪುಟದಲ್ಲಿ ಅವಕಾಶ ಕೊಟ್ಟರೆ ಪಕ್ಷಕ್ಕಾಗಿ ದುಡಿದಿರುವ ಹಿರಿಯ ಶಾಸಕರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬುದನ್ನು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೆಸರು ಬಹಿರಂಗಪಡಿಸಲು ಒಪ್ಪದ ಹಿರಿಯ ಶಾಸಕರೊಬ್ಬರು ಸ್ಪಷ್ಟಪಡಿಸಿದರು.
ಸಿಎಂ ಗಮನ ಸೆಳೆಯಲು ಕಸರತ್ತು - ಶಾಸಕರಿಂದ ಶಕ್ತಿ ಪ್ರದರ್ಶನ ಯತ್ನ
ಸಚಿವ ಸಂಪುಟ ಭರಾಟೆ ಜೋರಾಗಿದ್ದು, ಸಿಎಂ ಗಮನ ಸೆಳೆಯಲು ಶಾಸಕರು ರಾಜಕೀಯ ಕಸರತ್ತು ಪ್ರಾರಂಭಿಸಿದ್ದಾರೆ. ಇನ್ನು ಕೆಲ ಆಕಾಂಕ್ಷಿತರು ಶಕ್ತಿ ಪ್ರದರ್ಶನ ಮಾಡುವ ಪ್ರಯತ್ನ ಮಾಡಿ ಸಿಎಂ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಈ ಬಾರಿ ಸಂಪುಟದೊಳಗೆ ಸೇರ್ಪಡೆ ಆಗದಿದ್ದರೆ, ಇನ್ನೆಂದು ಸಂಪುಟ ಸೇರುವ ಅವಕಾಶವೇ ಸಿಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ತೆರೆಮರೆಯಲ್ಲಿ ಮ್ಯಾರಥಾನ್ ಸರ್ಕಸ್ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರ ಪತನಕ್ಕೆ ಪ್ರಮುಖಪಾತ್ರ ವಹಿಸಿದ್ದ ಶಾಸಕರು ಸಂಪುಟ ಸೇರ್ಪಡೆಗೆ ಲಾಬಿ ಶುರುವಿಟ್ಟುಕೊಂಡಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ಆಕಾಂಕ್ಷಿತರು ಸಭೆ ನಡೆಸುವ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.
ಸಿಎಂ ಯಡಿಯೂರಪ್ಪ ಆಪ್ತ ವಲಯದ ಶಾಸಕರು ಆಗಿಂದಾಗ್ಗೆ ಕೋರಿಕೆ ಸಲ್ಲಿಸುತ್ತಲೇ ಇದ್ದು, ಈ ಬಾರಿಯಾದರೂ ಸಚಿವ ಸ್ಥಾನ ಕರುಣಿಸುವಂತೆ ಕೇಳಿಕೊಂಡಿದ್ದಾರೆ. ಮಠ-ಮಾನ್ಯಗಳ ಸ್ವಾಮೀಜಿಗಳಿಗೂ ದುಂಬಾಲು ಬಿದ್ದು ಕರೆ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಬಿ.ಎಲ್.ಸಂತೋಷ್ ವಲಯದಲ್ಲಿ ಗುರುತಿಸಿಕೊಂಡು ಸಚಿವ ಸ್ಥಾನಕ್ಕಾಗಿ ಅಸಂತೋಷವಾಗಿರುವ ಶಾಸಕರು, ದೆಹಲಿ ಮಟ್ಟದಲ್ಲಿಯೇ ಪ್ರಭಾವ ಬಳಸುವ ಯತ್ನ ಮಾಡಲಾರಂಭಿಸಿದ್ದಾರೆ. ದೀಪಾವಳಿ ಮುಗಿದ ಕೂಡಲೆ ಸಂಪುಟ ಕಸರತ್ತು ಮತ್ತಷ್ಟು ವೇಗ ಪಡೆದುಕೊಳ್ಳಲಿದ್ದು, ರಾಜಕೀಯ ಕುತೂಹಲ ಕೆರಳಿಸಿದೆ.