ಯೋಗೀಶಗೌಡ ಹತ್ಯೆ ಪ್ರಕರಣ: ಕೋಟ್ಯಂತರ ರೂ. ವರ್ಗಾವಣೆ ಮೂಲ ಕೆದಕಿದ ಸಿಬಿಐ

Vinay Kulkarni - CONGRESS
Published on

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ವಿಚಾರಣೆಯನ್ನು ಭಾನುವಾರವೂ ಮುಂದುವರಿಸಿದ ಸಿಬಿಐ ಅಧಿಕಾರಿಗಳು, ಕೋಟ್ಯಂತರ ರೂ. ವರ್ಗಾವಣೆ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲು ವಿವಿಧ ಮೂಲಗಳನ್ನು ಕೆದಕಿದರು ಎಂದು ತಿಳಿದುಬಂದಿದೆ.

ಹುಬ್ಬಳ್ಳಿ ಗೋಕುಲ ಬಳಿಯ ಸಿಎಆರ್ ಮೈದಾನದಲ್ಲಿ ವಿಚಾರಣೆ ನಡೆಸಿರುವ ಅಧಿಕಾರಿಗಳು, ವಿನಯ ಕುಲಕರ್ಣಿ ಸಚಿವರಾಗಿದ್ದಾಗ ಆಪ್ತ ಕಾರ್ಯದರ್ಶಿಯಾಗಿದ್ದ ಎಪಿಎಂಸಿ ಅಧಿಕಾರಿ ಸೋಮಶೇಖರ ನ್ಯಾಮಗೌಡ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಜಿಪಂ ಎಇಇ ಎಸ್.ಎನ್. ಗೌಡರ, ಕುಲಕರ್ಣಿ ಮಾವ ಚಂದ್ರಶೇಖರ ಇಂಡಿ, ಯೋಗೀಶಗೌಡ ಪತ್ನಿ ಮಲ್ಲಮ್ಮರನ್ನು ವಿಚಾರಣೆಗೆ ಒಳಪಡಿಸಿದರು.

ನ್ಯಾಮಗೌಡಗೆ 2016ರ ಮೇ, ಜೂನ್​ನಲ್ಲಿ ಕೋಟ್ಯಂತರ ರೂ. ಕೈ ಬದಲಾಗಿರುವ ಮಾಹಿತಿ ಇದೆ ಎನ್ನಲಾಗಿದೆ. ವಿನಯ ಕುಲಕರ್ಣಿಗೆ ದೆಹಲಿ ವಿಮಾನ ಟಿಕೆಟ್ ಮತ್ತು ಹೋಟೆಲ್ ರೂಮ್ ಕಾಯ್ದಿರಿಸುವಿಕೆಯಲ್ಲಿ ನ್ಯಾಮಗೌಡ ಪಾತ್ರ ಇರುವುದನ್ನು ಇನ್​ಸ್ಪೆಕ್ಟರ್ ರಾಕೇಶ ರಂಜನ್ ನೇತೃತ್ವದ ಸಿಬಿಐ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ.

ಯಾವ ಕಾರಣಕ್ಕೆ ಹಣ ಸಂದಾಯ ಮಾಡಲಾಗಿತ್ತು, ಯಾರು ಯಾರಿಗೆ ಎಷ್ಟೆಷ್ಟು ಹಣ ಸಂದಾಯ ಮಾಡಿದ್ದಾರೆ ಎಂಬ ಮಾಹಿತಿಯನ್ನು ಸಿಬಿಐ ಕಲೆ ಹಾಕುತ್ತಿದೆ. ಕೊಲೆ ನಡೆದ ದಿನ ದೆಹಲಿಯಲ್ಲಿ ಇರುವುದಾಗಿ ದಾಖಲೆ ಸೃಷ್ಟಿ ಮಾಡಿರುವುದರ ಕುರಿತು ಸರಿಯಾದ ಉತ್ತರ ಕೊಡದ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿ- ನ್ಯಾಮಗೌಡ ವಿಚಾರಣೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.

ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ, ವಿನಯ ಕುಲಕರ್ಣಿ ಆಪ್ತ ನಾಗರಾಜ ಗೌರಿ, ಯೋಗೀಶಗೌಡ ಪತ್ನಿ ಮಲ್ಲಮ್ಮಳನ್ನು ಕಾಂಗ್ರೆಸ್​ಗೆ ಸೇರ್ಪಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಹಿನ್ನೆಲೆಯಲ್ಲಿ ಇಬ್ಬರನ್ನೂ ವಿಚಾರಣೆಗೆ ಕರೆಸಿದ್ದ ಸಿಬಿಐ ಹಲವು ಪ್ರಶ್ನೆಗಳಿಗೆ ಉತ್ತರ ಪಡೆದಿದೆ. ವಿನಯ- ನ್ಯಾಮಗೌಡ ಸ್ನೇಹಿತರು: ಕೆಎಎಸ್ ಅಧಿಕಾರಿ ಸೋಮಶೇಖರ ನ್ಯಾಮಗೌಡ ಹಾಗೂ ವಿನಯ ಕುಲಕರ್ಣಿ ಕಾಲೇಜು ದಿನಗಳಿಂದ ಸ್ನೇಹಿತರು ಎನ್ನಲಾಗಿದೆ. ನ್ಯಾಮಗೌಡರನ್ನು ಪ್ರೀತಿಯಿಂದ ಸ್ಯಾಂಡಿ ಎಂದು ವಿನಯ ಕುಲಕರ್ಣಿ ಕರೆಯುತ್ತಿದ್ದರು. ನ್ಯಾಮಗೌಡ ಸದ್ಯ ಹಾವೇರಿ ಜಿಲ್ಲೆ ಬ್ಯಾಡಗಿ ಎಪಿಎಂಸಿ ಕಾರ್ಯದರ್ಶಿಯಾಗಿದ್ದಾರೆ.

ಜಿ.ಪಂ. ಎಇಇ ಗೌಡರ ವಿಚಾರಣೆ: ಧಾರವಾಡ ಜಿಪಂ ಎಇಇ ಎಸ್.ಎನ್. ಗೌಡರ ಅವರನ್ನು ಸಿಬಿಐ ಭಾನುವಾರ ತೀವ್ರ ವಿಚಾರಣೆ ನಡೆಸಿತು. 2016ರ ಜಿಪಂ ಚುನಾವಣೆಯಲ್ಲಿ ಗೌಡರ ಫ್ಲೈಯಿಂಗ್ ಸ್ಕಾ್ವಡ್ ಆಗಿದ್ದರು. ಹೆಬ್ಬಳ್ಳಿ ಜಿಪಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಯೋಗೀಶಗೌಡ ವಿರುದ್ಧ ರಾಜಕೀಯ ಒತ್ತಡಕ್ಕೆ ಮಣಿದು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿದ್ದರು. ಚುನಾವಣೆ ವೇಳೆ ಹಣ ಹಂಚಿಕೆ ಆರೋಪದ ಮೇಲೆ ಯೋಗೀಶಗೌಡ ಜೈಲು ಸೇರಿದ್ದರು. ರಾಜಕೀಯ ಒತ್ತಡದಿಂದಲೇ ದೂರು ಸಲ್ಲಿಸಿದ ಕುರಿತು ಸಿಬಿಐ ಅಧಿಕಾರಿಗಳು ಎಸ್.ಎನ್. ಗೌಡರನ್ನು ಪ್ರಶ್ನಿಸಿ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಮತ್ತೆ ಕುಟುಂಬದವರ ಭೇಟಿ: ಪತ್ನಿ ಶಿವಲೀಲಾ, ಮಕ್ಕಳಾದ ದೀಪಾಲಿ, ವೈಶಾಲಿ ಹಾಗೂ ಹೇಮಂತ ಸಂಜೆ ವಿನಯರನ್ನು ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದರು. ವಿನಯ ಕುಲಕರ್ಣಿ ಜನ್ಮದಿನದ ಹಿನ್ನೆಲೆಯಲ್ಲಿ ಶನಿವಾರ ಸಿಎಆರ್ ಮೈದಾನದ ಬಳಿ ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಭಾನುವಾರ ಬೆರಳೆಣಿಕೆ ಯಷ್ಟು ಕಾರ್ಯಕರ್ತರು ಕಾಣಿಸಿಕೊಂಡರು. ಪೊಲೀಸರು ಭದ್ರತೆ ಕೈಗೊಂಡಿದ್ದರು.

ಬಿಜೆಪಿ ಮುಖಂಡ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿರುವುದರ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೈವಾಡವಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಜೋಶಿ ಅವರಿಗೆ ವಿನಯ ಕುಲಕರ್ಣಿ ಪ್ರಬಲ ಸ್ಪರ್ಧಿಯಾಗಿದ್ದರು. ಅದೇ ಕಾರಣಕ್ಕೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. | ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ

ತನಿಖೆಯಲ್ಲಿ ಹಸ್ತಕ್ಷೇಪ ಆಗದಿರಲಿ

ಗದಗ: ಬಿಜೆಪಿ ಮುಖಂಡ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ವಿಚಾರಣೆ ನಡೆಸುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ನಡೆಯಬಾರದು. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ಅಪಾರವಾದ ಗೌರವವಿದೆ. ವಿಚಾರಣೆ ನ್ಯಾಯಯುತವಾಗಿ ನಡೆಯಲಿ ಎಂದು ವಿವಿಧ ಮಠಾಧೀಶರು ಒಮ್ಮತದ ಹೇಳಿಕೆ ನೀಡಿದ್ದಾರೆ. ಗದಗನ ತೋಂಟದಾರ್ಯ ಮಠದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಸ್ವಾಮೀಜಿ ಉಪಸ್ಥಿತರಿದ್ದರು. ಚರ್ಚೆಯ ನಂತರ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಲಿಖಿತ ಹೇಳಿಕೆ ಓದಿದರು. ಕೊಲೆ ಆಗಿರುವ ಯೋಗೀಶಗೌಡ ಮತ್ತು ವಿನಯ ಕುಲಕರ್ಣಿ ಇಬ್ಬರೂ ಲಿಂಗಾಯತರು. ಇದರಲ್ಲಿ ಜಾತಿ, ಮತ, ಪಂಥ ಯಾವುದೂ ಸಂಬಂಧವಿಲ್ಲ. ನ್ಯಾಯ ಸಮ್ಮತ ವಿಚಾರಣೆ ನಡೆಯಬೇಕು. ವಿನಯ ಕುಲಕರ್ಣಿ ಅಪರಾಧಿಯಲ್ಲ, ಅವರು ಆರೋಪಿ ಅಷ್ಟೇ ಎಂದು ಹೇಳಿದರು. ಸಿಬಿಐ ಅಧಿಕಾರಿಗಳ ವಿಚಾರಣೆ ನ್ಯಾಯ ಸಮ್ಮತವಾಗಿರಲಿ. ನಮಗೂ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಪಾರವಾದ ಗೌರವವಿದೆ. ನ್ಯಾಯಯುತವಾದ ವಿಚಾರಣೆ ನಡೆಯಲಿದೆ ಎಂಬ ಆಶಾಭಾವನೆ ಇದೆ ಎಂದರು. ವಿನಯ ಕುಲಕರ್ಣಿ ನಿರಪರಾಧಿಯಾಗಿ ಹೊರಗೆ ಬರಬೇಕು ಎಂಬುದು ನಮ್ಮ ಅಭಿಲಾಷೆ. ಈ ಕುರಿತು ಬೇರೆಯವರ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ. ಅದು ಅವರವರ ವೈಯಕ್ತಿಕ ವಿಚಾರ. ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಶ್ರೀಗಳು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net