ಶನಿವಾರವೂ ಮುಂದುವರಿದ ಸಿಬಿಐ ವಿಚಾರಣೆ

21 Dwd 3A
Published on

ಧಾರವಾಡ: ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಇಲ್ಲಿನ ಉಪನಗರ ಠಾಣೆಯಲ್ಲಿ ಶನಿವಾರ ಇಡೀ ದಿನ ಹಲವರನ್ನು ತೀವ್ರ ವಿಚಾರಣೆಗೊಳಪಡಿಸಿದರು. ಸಿಬಿಐ ಹಿರಿಯ ಅಧಿಕಾರಿ ರಾಕೇಶ್ ರಂಜನ್ ನೇತೃತ್ವದ ಐವರ ತಂಡ ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ಅನೇಕ ಮಾಹಿತಿ ಸಂಗ್ರಹಿಸಿತು. ಕೊಲೆಯ ಸಂಚು ಹಾಗೂ ಸಾಕ್ಷಿ ನಾಶದ ಅಡಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಅವರನ್ನು ಠಾಣೆಗೆ ಕರೆಸಿ ವಿಚಾರಣೆಗೊಳಪಡಿಸಲಾಯಿತು.

ಇದೇ ವೇಳೆ ವಿನಯ ಸಂಬಂಧಿ ಚಂದ್ರಶೇಖರ ಇಂಡಿ ಅವರನ್ನು ವಿಚಾರಣೆ ನಡೆಸಲಾಯಿತು. ಇಬ್ಬರೂ ಸಂಜೆ 7.30ರ ಸುಮಾರಿಗೆ ಠಾಣೆಯಿಂದ ಹೊರಬಂದರು. ಈ ವೇಳೆ ಪ್ರತಿಕ್ರಿಯಿಸಿದ ವಿಜಯ ಕುಲಕರ್ಣಿ, ‘ಪ್ರಕರಣ ನ್ಯಾಯಾಲಯದಲ್ಲಿದೆ’ ಎಂದರು.

ಇದೇ ವೇಳೆ ವಿನಯ ಕುಲಕರ್ಣಿ ಮಾಜಿ ಆಪ್ತ ಸಹಾಯಕ, ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ, ಯೋಗೀಶಗೌಡ ಕೊಲೆ ಪ್ರಕರಣದ ಸುಪಾರಿ ನೀಡಿರುವ ಆರೋಪಿ ಬಸವರಾಜ ಮುತ್ತಗಿಯನ್ನು ಶನಿವಾರವೂ ಠಾಣೆಗೆ ಕರೆಸಲಾಗಿತ್ತು. ಅಲ್ಲದೆ, ರೌಡಿಶೀಟರ್ ಆಗಿದ್ದ ಮಕ್ತುಂ ಸೊಗಲದ ಹಾಗೂ ಕಾಂಗ್ರೆಸ್ ಮುಖಂಡ ಹನುಮಂತ ಕೊರವರನನ್ನೂ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದರು. ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐನಿಂದ ಬಂಧಿತರಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ಅವರ ನ್ಯಾಯಾಂಗ ಬಂಧನ ಅವಧಿ ನ. 23ಕ್ಕೆ ಅಂತ್ಯಗೊಳ್ಳಲಿದೆ. ಅಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದವರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net