ಮಂಡ್ಯ ನಗರದಲ್ಲಿ ಯೋಗಥಾನ್ ಯಶಸ್ವಿ: 8000ಕ್ಕೂ ಹೆಚ್ಚು ಜನರು ಭಾಗಿ

15_01_Mdy_02(Yogathan)
Published on

ಮಂಡ್ಯ: ನಗರದ ಪಿಇಟಿ ಕ್ರಿಕೆಟ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಯೋಗಥಾನ್ ಯಶಸ್ವಿಯಾಯಿತು. 8000ಕ್ಕೂ ಹೆಚ್ಚು ಜನರು ಭಾಗಿಯಾಗಿ ವಿವಿಧ ಆಸನಗಳ ಪ್ರದರ್ಶನ ನೀಡಿದರು.

ಮೊದಲಿಗೆ ಪ್ರಾರ್ಥನೆ, ಸಮಸ್ಥಿತಿ, ಕುತ್ತಿಗೆ ಹಿಂದೆ ಮುಂದೆ, ಕುತ್ತಿಗೆ ಬಲ ಎಡ, ಕುತ್ತಿಗೆಯನ್ನು ವೃತ್ತಾಕಾರದಲ್ಲಿ ತಿರುಗಿಸುವುದು, ಭುಜದ ವ್ಯಾಯಾಮ ಮೇಲೆ ಕೆಳಗೆ, ವೃತ್ತಾಕಾರದಲ್ಲಿ ತಿರುಗಿಸುವುದು, ಮಂಡಿ ವ್ಯಾಯಾಮ, ಸೊಂಟದ ವ್ಯಾಯಾಮ ನಡೆಯಿತು.

ನಂತರ ತಡಾಸನ, ವೃಕ್ಷಾಸನ, ಪಾದ ಹಸ್ತಾಸನ-1, ಪಾದ ಹಸ್ತಾಸನ-2, , ಅರ್ಧಚಕ್ರಾಸನ, ತ್ರಿಕೋನಾಸನ, ಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ಮಕರಾಸನ, ವಕ್ರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಭಂದಾಸನ, ಉತ್ಥಾನ ಪಾದಾಸನ, ಅರ್ಧ ಹಾಲಾಸನ, ಪವನ ಮುಕ್ತಾಸನ, ಶವಾಸನ, ಕಪಾಲಭಾತಿ, ನಾಡಿ ಶೋಧನ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ, ಭ್ರಮರೀ ಪ್ರಾಣಾಯಾಮದ ಬಳಿಕ ಧ್ಯಾನ, ಶಾಂತಿ ಮಂತ್ರ ಹೇಳಲಾಯಿತು.

ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ ದೇಶ ಭಾರತ ಇಂದು ವಿಶ್ವಗುರುವಾಗಿ ಹೊರಹೊಮ್ಮಿದೆ. 2014ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಬಗ್ಗೆ ವಿಶ್ವ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿತು. ಯೋಗಥಾನ್‌ನಲ್ಲಿ 140ಕ್ಕೂ ಹೆಚ್ಚು ದೇಶ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದೆ ಎಂದರು.

ಯೋಗಸಾನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ದಿಸುತ್ತದೆ. ಯೋಗ ದಿನನಿತ್ಯ ಚಟುವಟಿಕೆಯಾಗಬೇಕು. ಕಳೆದ ವರ್ಷವೇ ಯೋಗಾಥಾನ್ ನಡೆಯಬೇಕಿತ್ತು. ಅತಿವೃಷ್ಠಿಯ ಹಿನ್ನಲೆ ಮುಂದೂಡಲಾಯಿತು. 21 ಜಿಲ್ಲೆಯಲ್ಲಿ ಏಕಕಾಲಕ್ಕೆ ಯೋಗಾಥಾನ್ ಕಾರ್ಯಕ್ರಮ ನಡೆದಿದೆ. 10 ಲಕ್ಷಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ. ರಾಜಸ್ಥಾನದ ಕೋಟದಲ್ಲಿ ಈ ಹಿಂದೆ 1, 08,000 ಜನ ಯೋಗಾಸಕ್ತರು ಭಾಗವಹಿಸಿ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ಅಂತೆಯೇ ಕರ್ನಾಟಕ ಕೂಡ ಗಿನ್ನಿಸ್ ಬುಕ್ ಆ್ ರೆಕಾರ್ಡ್‌ಗಾಗಿ ಯೋಗಾಥಾನ್ ಮೂಲಕ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಯೋಗಾಸನ ಮತ್ತು ಆಯುರ್ವೇದ ಭಾರತದಲ್ಲಿ ಪುರಾತನ ಕಾಲದಿಂದಲೂ ಇದೆ. ಯೋಗಸಾನದಲ್ಲಿ ಜಾತಿ ಬೇಧವಿಲ್ಲ. ಎಲ್ಲರೂ ಭಾಗವಹಿಸಬಹುದು. ಇದು ಸೋದರ ಭಾವನೆ ಬೆಳಸುತ್ತದೆ. ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಬೆಳೆಸುತ್ತದೆ. ಯೋಗಾಭ್ಯಾಸವನ್ನು ಪ್ರತಿ ದಿನ ಮನೆಯಲ್ಲಿ ಮಾಡುವಂತೆ ಸಲಹೆ ನೀಡಿದರು.

ಪತಾಂಜಲಿ ಯೋಗ ಸಂಸ್ಥೆಯ ಶಂಕರನಾರಾಯಣ ಶಾಸಿ ಮಾತನಾಡಿ, ದೇಹ ಮತ್ತು ಮನಸ್ಸು ಹಿಡಿತದಲ್ಲಿದ್ದರೆ ಯೋಗಾಭ್ಯಾಸ ನಡೆಸಬಹುದು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಯೋಗಾಸನ ಭಾರತೀಯ ಪರಂಪರೆ. ಯೋಗಾಸನವನ್ನು ಉಳಿಸಿ ಬೆಳಸಿ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net