ಜ.15ರಂದು ಯೋಗಾಥಾನ್‌ಗೆ ಸಿದ್ಧತೆ ಮಾಡಿಕೊಳ್ಳಿ: ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚನೆ

07_01_Mdy_03(Dc Meeting)
Published on

ಮಂಡ್ಯ: ನಗರದ ಪಿಇಟಿ ಕ್ರಿಕೆಟ್ ಮೈದಾನದಲ್ಲಿ ಜ.15ರಂದು ಯೋಗಥಾನ್ ನಡೆಯಲಿದೆ. ಈ ಕಾರ್ಯಕ್ರಮ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆಯಾಗುವುದರಿಂದ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚನೆ ನೀಡಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂದು ಬೆಳಗ್ಗೆ 7 ಗಂಟೆಯಿಂದ 7.45 ರವರೆಗೆ ನಡೆಯಲಿರುವ ಯೋಗಥಾನ್‌ನಲ್ಲಿ ಸುಮಾರು 10 ಸಾವಿರ ಜನ ಭಾಗವಹಿಸುವ ಗುರಿ ಹೊಂದಲಾಗಿದೆ. 13 ವರ್ಷ ಮೇಲ್ಪಟ್ಟವರು ಜ.11ರೊಳಗೆ ಆನ್‌ಲೈನ್‌ಲ್ಲಿ ನೋಂದಣಿ ಮಾಡಿಕೊಂಡು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿ ಯೋಗಾಥಾನ್‌ಗೆ ಆಗಮಿಸಬಹುದು ಎಂದರು.

ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾಡಲಾಗಿದ್ದ ಆಸನಗಳನ್ನು ಯೋಗಥಾನ್‌ನಲ್ಲಿ ಮಾಡಲಾಗುವುದು. ನೋಂದಣಿ ಮಾಡಿಕೊಂಡಿರುವವರು ಜ.13 ಮತ್ತು 14ರಂದು ನಡೆಯುವ ಪೂರ್ವಾಭ್ಯಾಸ ಹಾಗೂ 15ರಂದು ನಡೆಯುವ ಯೋಗಾಥಾನ್ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಶಾಲಾ, ಕಾಲೇಜು, ವಸತಿ ಶಾಲೆಗಳಿಂದ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲು ವ್ಯವಸ್ಥೆ ಮಾಡಿ ಎಂದರು.

ಮುಖ್ಯ ವೇದಿಕೆ ಹಾಗೂ 1000 ಜನಕ್ಕೆ ಒಬ್ಬರು ತರಬೇತುದಾರರಿಗೆ ಒಂದು ವೇದಿಕೆಯಂತೆ 10 ವೇದಿಕೆ ನಿರ್ಮಾಣವಾಗಬೇಕು. ಪ್ರತಿಯೊಬ್ಬರಿಗೂ ಯೋಗ ಮಾಡಲು ಬೇಕಿರುವ ಸ್ಥಳದ ಗುರುತು ಮಾಡಬೇಕು. ಯೋಗ ಗುರು ಶಂಕರ ನಾರಾಯಣಶಾಸ್ತ್ರಿ ಅವರು ಯೋಗ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕ್ರೀಡಾಪಟು, ಧರ್ಮಗುರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ. ವಾಹನ ಪಾರ್ಕಿಂಗ್, ಕುಡಿಯುವ ನೀರು, ಶೌಚಗೃಹ, ವೇದಿಕೆ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಿ ಜವಾಬ್ದಾರಿಗಳನ್ನು ವಹಿಸಿ. 7 ರಿಂದ 8 ಪ್ರವೇಶದ್ವಾರದ ವ್ಯವಸ್ಥೆ ಮಾಡಬೇಕು. ಇದರಿಂದ ಜನ ಸಂದಣಿ ಉಂಟಾಗುವುದು ಕಡಿಮೆಯಾಗುತ್ತದೆ ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಬಿಇಒ ಸೌಭಾಗ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net