

ಧಾರವಾಡ: ರಾಜ್ಯಾದ್ಯಂತ ಆ. 28ರಂದು ಆಯೋಜಿಸುತ್ತಿರುವ ಬೃಹತ್ ಯೋಗಥಾನ್ 2022 ಯಶಸ್ವಿಗೊಳಿಸಲು ಎನ್ಎಸ್ಎಸ್ ಹಾಗೂ ಎನ್ಸಿಸಿ ವಿದ್ಯಾರ್ಥಿಗಳು ಭಾಗವಹಿಸುವಿಕೆ ಮುಖ್ಯವಾಗಿದೆ ಎಂದು ಎಡಿಸಿ ಶಿವಾನಂದ ಭಜಂತ್ರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಯೋಗಥಾನ್ 2022ರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಿಂದ ಸುಮಾರು 20 ಸಾವಿರ ಯೋಗಪಟುಗಳು ಭಾಗವಹಿಸಬೇಕು. ಈಗಾಗಲೇ ಸಭೆ ನಡೆಸಿ ಇಲಾಖೆ ಹಾಗೂ ಸಂಘಟನೆಗಳಿಗೆ ಮಾಹಿತಿ ನೀಡಲಾಗಿದೆ. ಈಗಿನಿಂದಲೇ ಯೋಗಾಸನಗಳ ತರಬೇತಿ ಮಾಡಿಕೊಳ್ಳಬೇಕು. ಎಲ್ಲ ಪ್ರೌಢಶಾಲಾ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು. ಶ್ರೀನಿವಾಸಮೂರ್ತಿ ಕೊರ್ಲಹಳ್ಳಿ, ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಹಾಗೂ ಪತಂಜಲಿ ಯೋಗಪೀಠದ ರಾಜ್ಯಾಧ್ಯಕ್ಷ ಭವಾರಲಾಲ್ ಆರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪತ್ರಾಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಕೃಷಿ ವಿವಿ ಸ್ಥಳ ನಿಯುಕ್ತಿ ಕೋಶಧಿಕಾರಿ ಡಾ. ಅರವಿಂದ ಕುಮಾರ, ಕವಿವಿ ಎನ್ಎಸ್ಎಸ್ ಅಧಿಕಾರಿ ಡಾ. ಎಂ.ಬಿ. ದಳಪತಿ, ಪೊಲೀಸ್ ವಸತಿ ಶಾಲೆ ಯೋಗ ಶಿಕ್ಷಕ ಪ್ರಕಾಶ ಪವಾಡಶೆಟ್ಟಿ, ಆಯುಷ್ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಪತಂಜಲಿ ಯೋಗ ಕೇಂದ್ರ, ಶಾಲಾ ಕಾಲೇಜು, ವಿವಿಗಳ ಪ್ರತಿನಿಧಿಗಳು, ಯೋಗ ಸಂಘಟನೆಗಳ ಪ್ರಮುಖರು, ಎನ್ಎಸ್ಎಸ್, ಯೋಗ ಅಧ್ಯಯನ ವಿಭಾಗದ ಅಧ್ಯಾಪಕರು, ಇತರರು ಇದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಸರಶಟ್ಟಿ ಸ್ವಾಗತಿಸಿದರು.