

ಉಡುಪಿ: ವಿದ್ಯೋದಯ ಟ್ರಸ್ಟ್ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಯೋಗಾಸನ ಸ್ಪರ್ಧೆ ಬುಧವಾರ ನಡೆಯಿತು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎನ್. ನಾಗರಾಜ ಬಲ್ಲಾಳ್ ಉದ್ಘಾಟಿಸಿ, ಯೋಗವೆಂಬುದು ದೈಹಿಕ, ಮಾನಸಿಕ ಆರೋಗ್ಯವನ್ನು ಗಟ್ಟಿಗೊಳಿಸುತ್ತದೆ. ಹಾಗಾಗಿ ಇವತ್ತಿನ ಸಮಾಜಕ್ಕೆ ಯೋಗ ಅತೀ ಅಗತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಮಾತನಾಡಿ, ಯೋಗಕ್ಕೆ ಜಾಗತಿಕ ಮಟ್ಟದಲ್ಲಿ ಮಹತ್ವ ಸಿಕ್ಕಿರುವ ಸಂದರ್ಭದಲ್ಲಿ ಶಾಲಾ ಕಾಲೇಜಿನಲ್ಲಿ ಯೋಗಾಭ್ಯಾಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಕ್ರೀಡಾ ಸಂಯೋಜಕ ದಿನೇಶ ಕುಮಾರ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಸಂದೀಪ್ ಕುಮಾರ್ ಸ್ವಾಗತಿಸಿದರು. ಸಂಸತ ಉಪನ್ಯಾಸಕ ಶಿವಪ್ರಸಾದ ಭಟ್ ನಿರೂಪಿಸಿ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೀರೇಂದ್ರ ಶೆಟ್ಟಿಗಾರ್ ಕಾರ್ಯಕ್ರಮ ಸಂಯೋಜಿಸಿದರು.