

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಆಧುನಿಕತೆಯ ಜೀವನಶೈಲಿ, ಆಹಾರ ಪದ್ಧತಿಗಳ ಅನುಸರಣೆಯಿಂದ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಯೋಗ ಸಂಜೀವಿನಿಯಾಗಲಿದೆ ಎಂದು ಕನ್ನಮಂಗಲದ ಅಮ್ಮನಗುಡ್ಡ ನರಸಿಂಹಶಾಸ್ತ್ರಿ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಾಧನಾ, ಅಂಜನಾದ್ರಿ ಯೋಗ ಅಧ್ಯಾತ್ಮ ಕೇಂದ್ರ ಹಾಗೂ ರೋಟರಿ ಸಂಸ್ಥೆ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ದೇಶದ ಏಳಿಗೆಯಲ್ಲಿ ಜನಸಾಮಾನ್ಯರ ಆರೋಗ್ಯ ಮಹತ್ವದ ಪಾತ್ರವಹಿಸಲಿದೆ. ವ್ಯಕ್ತಿಯ ದೈಹಿಕ, ಮಾನಸಿಕ ಬಲಸಂವರ್ಧನೆಯಷ್ಟೆ ಅಲ್ಲ, ಇಡೀ ರಾಷ್ಟ್ರ ಬಲಪಡಿಸುವ ಶಕ್ತಿ ಯೋಗಕ್ಕಿದೆ. ಆದ್ದರಿಂದ ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ರೂಢಿಸಿಕೊಂಡಾಗ ದೈವದತ್ತವಾಗಿ ದೊರೆತಿರುವ ಮನುಷ್ಯ ಜೀವನದಲ್ಲಿ ಸಂತೃಪ್ತಿ ಪಡೆಯಬಹುದು ಎಂದರು.
ಯೋಗ ಜೀವನದ ಭಾಗವಾಗಬೇಕು. ಗ್ರಾಮೀಣ ಭಾಗದಲ್ಲಿ ಯೋಗಕ್ಕೆ ಹೆಚ್ಚಿನ ಪ್ರಚಾರ ನೀಡಿ ಅಭ್ಯಸಿಸುವಂತೆ ಪ್ರೇರೇಪಿಸಿದರೆ ಯೋಗ ದಿನ ಸಾರ್ಥಕವಾಗಲಿದೆ ಎಂದರು. ಸಾಧನಾ ಯೋಗ ಕೇಂದ್ರ ಯೋಗಚಾರ್ಯ ವಾದಿರಾಜ ಮಾತನಾಡಿ, ಮನುಷ್ಯನಲ್ಲಿ ಸದ್ಭಾವನೆ ಬೆಳೆಸಿ, ಸತ್ಕಾರ್ಯಗಳಿಗೆ ಪ್ರೇರೇಪಿಸುವ ಶಕ್ತಿ ಯೋಗಕ್ಕಿದೆ. ಜೀವನ ಆಧುನಿಕತೆಯ ಯುಗದಲ್ಲಿ ಶಾಂತಿ ಹಾಗೂ ಒತ್ತಡ ರಹಿತ ಜೀವನ ನಡೆಸಲು ಯೋಗ ಸಹಕಾರಿ ಎಂದರು.
ಬುಧವಾರ ಬೆಳಗ್ಗೆ 5.45 ರಿಂದ 7.15 ರವರೆಗೆ ನೂರಾರುಯೋಗಾಸಕ್ತರು, ಶಾಲಾ ಮಕ್ಕಳು ಪಾಲ್ಗೊಂಡು ವಿವಿಧ ಯೋಗ ಭಂಗಿ ಪ್ರದರ್ಶಿಸಿದರು.
ಗ್ರಾಪಂ ಸದಸ್ಯ ಹನುಮಂತರಾಜು, ಮಾಜಿ ಸದಸ್ಯೆ ಮಂಜುಳಾ ಸುರೇಶ್, ಶ್ರೀ ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜು ಪ್ರಾದ್ಯಾಪಕ ಡಾ.ಜಿ.ಗಂಗರಾಜು, ಗ್ರಾಮಲೆಕ್ಕಾಧಿಕಾರಿ ಶಿವಕುಮಾರ್, ಮುಖಂಡ ರಂಗನಾಥ್ ಇದ್ದರು
ಪವಾಡ ಶ್ರೀ ಬಸವಣ್ಣ ದೇವರ ಮಠ, ಸಾಧನ ಯೋಗ ಮತ್ತು ಆಧ್ಯಾತ್ಮಿಕ ಕೇಂದ್ರದ ಜತೆಗೆ ವಿವಿಧ ಶಾಖೆಗಳು, ತಾಲೂಕು ಆಡಳಿತ, ನಗರಸಭೆ, ರೋಟರಿ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಾರ್ನಿಂಗ್ ವಾಕಿಂಗ್ ಅಸೋಸಿಯೇಷನ್ ಜತೆಗೆ ಯೋಗಾಭಿಮಾನಿಗಳು ಯೋಗ ದಿನಾಚರಣೆಗೆ ಸಹಕಾರ ನೀಡಿದ್ದರು.