

ಹುಬ್ಬಳ್ಳಿ: ಬೆಂಗಳೂರಿನ ಮಾರತನಹಳ್ಳಿಯಲ್ಲಿ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದಿಂದ ಪ್ರತಿ ವರ್ಷ ನೀಡುವ ರಾಷ್ಟ್ರೀಯ ಮಟ್ಟದ ಯೋಗಾಚಾರ್ಯ ಪ್ರಶಸ್ತಿಯನ್ನು ಹುಬ್ಬಳ್ಳಿಯ ಯೋಗಗುರು, ಪತಂಜಲಿ ಯೋಗಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ನಮ್ಮ ಮಠದ ವತಿಯಿಂದ ಪ್ರತೀ ವರ್ಷ ಯೋಗ ಕ್ಷೇತ್ರದಲ್ಲಿ ಅವಿರತವಾಗಿ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಗಣ್ಯಾತಿಗಣ್ಯ ಯೋಗ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ ಭವರಲಾಲ್ ಆರ್ಯ ಅವರಿಗೆ ಪ್ರದಾನ ಮಾಡಿರುವುದು ನಮ್ಮ ಸೌಭಾಗ್ಯ. ಏಕೆಂದರೆ ಭವರಲಾಲ್ ಆರ್ಯ ಅವರ ಯೋಗ ಸೇವೆಗೆ ಯಾವುದೇ ಮಿತಿಗಳಿಲ್ಲ. ದಿನದ 24 ಗಂಟೆಯೂ ಯೋಗವನ್ನೇ ಜೀವನವಾಗಿಸಿಕೊಂಡವರು ಇವರು. ಇಲ್ಲಿಯವರೆಗೆ 18 ಲಕ್ಷಕ್ಕಿಂತ ಅಧಿಕ ಕಿಲೋಮೀಟರ್ ಪ್ರಯಾಣ ಮಾಡಿ 35 ಲಕ್ಷಕ್ಕೂ ಅಧಿಕ ಜನರಿಗೆ ಉಚಿತವಾಗಿ ಯೋಗ ತರಬೇತಿ ನೀಡಿದ್ದಾರೆ ಮತ್ತು ಕರ್ನಾಟಕದಾದ್ಯಂತ 1500ಕ್ಕೂ ಅಧಿಕ ಉಚಿತ ನಿರಂತರ ಯೋಗ ಕೇಂದ್ರಗಳನ್ನು ನಡೆಸುತ್ತಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ರೂವಾರಿ ಶ್ರೀನಿವಾಸ ಮೂರ್ತಿ, ಯೋಗಾಚಾರ್ಯ ರವೀಂದ್ರನಾಥ, ಮುಖ್ಯೋಪಾಧ್ಯಾಯಿನಿ ಶ್ರೀದೇವಿ ಹಿರೇಮಠ, ರತ್ನಾಜಿ ಇತರರು ಇದ್ದರು.