ಉದ್ಯಾನದಲ್ಲಿ ಯೋಗ ಯೋಗಾ

11
Published on



ಮೈಸೂರು:
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯೋಗದಸರಾ ಉಪಸಮಿತಿ ವತಿಯಿಂದ ಮಂಗಳವಾರ ಬೆಳಗ್ಗೆ ಸರಸ್ವತಿಪುರಂನ ಜವರೇಗೌಡ ಪಾರ್ಕ್‌ನಲ್ಲಿ ಆಯೋಜಿಸಿದ್ದ ‘ಯೋಗವಾಹಿನಿ’ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.


ಆಯಷ್ ಇಲಾಖೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿ ಯೋಗ ಪ್ರದರ್ಶಿಸಿದರು.

ಶಾಸಕ ಎಲ್.ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನೇಕ ಸಮಸ್ಯೆಗಳಿಗೆ ಯೋಗ ಉತ್ತಮ ಪರಿಹಾರ. ಜನರು ತಮ್ಮ ಒತ್ತಡದ ಜೀವನದಲ್ಲಿ ನಿಯಮಿತವಾಗಿ ಯೋಗ ಮಾಡುವ ಮೂಲಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಮೈಸೂರಿಗೂ ಯೋಗಕ್ಕೂ ನಂಟಿದೆ. ನನ್ನ ಕ್ಷೇತ್ರವ್ಯಾಪ್ತಿಯಲ್ಲಿರುವ ಗೋಕುಲಂ ಬಡಾವಣೆ ಯೋಗ ಗುರುಗಳ ತವರೆನಿಸಿದೆ. ಅಲ್ಲಿಗೆ ಪ್ರತಿ ವರ್ಷ ದೇಶ, ವಿದೇಶಗಳಿಂದ ಸಾವಿರಾರು ಜನರು ಆಗಮಿಸಿ ಯೋಗ ಕಲಿಯುತ್ತಿದ್ದಾರೆ. ಇದು ಮೈಸೂರಿಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.


ಪ್ರಧಾನಿ ಮೋದಿ ಅವರು ವಿಶ್ವಕ್ಕೇ ಯೋಗವನ್ನು ಪರಿಚಯಿಸಿದರು. 2015ರಲ್ಲಿ 167 ದೇಶಗಳು ವಿಶ್ವ ಯೋಗ ದಿನವನ್ನು ಆಚರಿಸಿದವು. ಯೋಗ ದಿನಾಚರಣೆಗೆ ಪ್ರಮುಖ ಕಾರಣಕರ್ತರು ನಮ್ಮ ಪ್ರಧಾನಿ. ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರನ್ನು ಒಂದೆಡೆ ಸೇರಿಸಿ ಯೋಗ ಮಾಡುವ ಮೂಲಕ ದಾಖಲೆ ನಿರ್ಮಿಸಲು ಸಿದ್ಧತೆ ನಡೆಸುತ್ತೇವೆ ಎಂದರು.
ಯೋಗ ದಸರಾ ಸಮಿತಿ ಅಧ್ಯಕ್ಷ ಬಾಲಕೃಷ್ಣ, ಉಪ ಮೇಯರ್ ರೂಪಾ, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಶಿವಕುಮಾರ್, ಪ್ರಮೀಳಾ ಭರತ್, ಮುಖಂಡರಾದ ಡಾ.ಲಕ್ಷ್ಮೀನಾರಾಯಣ ಶೆಣೈ, ಶ್ರೀಹರಿ, ಡಾ.ಪುಷ್ಪಾ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net