

ಹುಬ್ಬಳ್ಳಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್ಪಿವೈಎಸ್ಎಸ್), ಯೋಗಸ್ಪರ್ಶ ಪ್ರತಿಷ್ಠಾನ ಇವುಗಳ ಸಂಯುಕ್ತಾಶ್ರಯದಲ್ಲಿ ವಿಜಯವಾಣಿ ಮಾಧ್ಯಮ ಸಹಯೋಗದೊಂದಿಗೆ ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 6.10ಕ್ಕೆ ನಗರದ ಕೊಪ್ಪಿಕರ ರಸ್ತೆಯಲ್ಲಿರುವ ಸೆಟಲೈಟ್ ಕಾಂಪ್ಲೆಕ್ಸ್ ಮೇಲ್ಮಹಡಿಯಲ್ಲಿ ಯೋಗ ಶಿಬಿರ ಆಯೋಜಿಸಲಾಗಿದೆ. ಯೋಗಾಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.
ಸಭಾ ಕಾರ್ಯಕ್ರಮ: ಸೆಟಲೈಟ್ ಕಾಂಪ್ಲೆಕ್ಸ್ ಮೇಲ್ಮಹಡಿಯಲ್ಲಿ ಬೆಳಗ್ಗೆ 7ಕ್ಕೆ ವಿಶ್ವ ಯೋಗ ದಿನಾಚರಣೆಯ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆರ್ಟವಾಲೆ ಚೇರ್ಮನ್ ಗೌತಮ ಓಸ್ವಾಲ್, ಐಬಿಎಂಆರ್ ಚೇರ್ಮನ್ ವಿನಯಚಂದ್ರ ಮಹೇಂದ್ರಕರ, ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು.
ವಾಣಿಜ್ಯೋದ್ಯಮಿ ಪ್ರಸನ್ನ ದೀಕ್ಷಿತ ಅಧ್ಯಕ್ಷತೆ ವಹಿಸುವರು. ದಯಾನಂದ ಮಗಜಿಕೊಂಡಿ ವಕ್ತಾರರಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಯೋಗ ಜಾಗೃತಿ ನಡಿಗೆ
ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ಸ್ಪರ್ಶ ಪ್ರತಿಷ್ಠಾನ ವತಿಯಿಂದ ಯೋಗದಿಂದ ಸಾಮಾಜಿಕ ಸ್ವಾಸ್ಥ್ಯದ ಅರಿವು ಮೂಡಿಸಲು ಹಾಗೂ ವಿಶ್ವ ಯೋಗ ದಿನದ ಅಂಗವಾಗಿ ಗುರುವಾರ ಸಂಜೆ ನಗರದಲ್ಲಿ ಯೋಗ ಜಾಗೃತಿ ನಡಿಗೆ ಆಯೋಜಿಸಲಾಗಿತ್ತು.
ನಗರದ ಕೊಪ್ಪಿಕರ ರೋಡ್ ಸೆಟಲೈಟ್ ಕಾಂಪ್ಲೆಕ್ಸ್ ಎದುರು ಜಾಗೃತಿ ನಡಿಗೆಗೆ ಕಾಮತ್ ಹೋಟೆಲ್ ಸಮೂಹಗಳ ಮಾಲೀಕ ಸದಾನಂದ ಕಾಮತ್ ಚಾಲನೆ ನೀಡಿದರು. ಕೊಪ್ಪಿಕರ ರೋಡ್ ಮೂಲಕ ಕಾರ್ಪೊರೇಷನ್ ಕಚೇರಿ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ ಪೇಟೆ, ವಿಕ್ಟೋರಿಯಾ ರಸ್ತೆ ಮೂಲಕ ಸಾಗಿ ವಾಪಸ್ ಕೊಪ್ಪಿಕರ ರಸ್ತೆಗೆ ಆಗಮಿಸಿ ಸಮಾರೋಪಗೊಳಿಸಲಾಯಿತು.
ಸಮಿತಿಯ 200ಕ್ಕೂ ಹೆಚ್ಚು ಯೋಗ ಬಂಧುಗಳು ಜಾಗೃತಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಶಿಸ್ತಿನಿಂದ ನಡಿಗೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಯೋಗ ಜಾಗೃತಿ ನಡಿಗೆ ಸಂಚಾಲಕ ಬಾಳಕೃಷ್ಣ, ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಜೋಶಿ, ಯೋಗಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಕಾರ್ಯದರ್ಶಿ ನಾಗರಾಜ್ ನಾಗರಹಳ್ಳಿ ಇತರರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.