

ಸಂಡೂರು: ಭಾರತದ ಯೋಗ ಈಗ ಪ್ರಪಂಚದಾದ್ಯಂತ ಪಸರಿಸಿದೆ ಎಂದು ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಎ.ಘೋರ್ಪಡೆ ಹೇಳಿದರು.
ಪಟ್ಟಣದ ಎಸ್‌ಆರ್‌ಎಸ್ ಶಾಲೆಯ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಗವು ದೈಹಿಕ, ಮಾನಸಿಕ ಆರೋಗ್ಯ ಹಾಗೂ ಅಧ್ಯಾತ್ಮವನ್ನು ಪ್ರಚೋದಿಸಿ ನಮ್ಮ ಬದುಕನ್ನು ಪರಿಶುದ್ಧಗೊಳಿಸುತ್ತದೆ. ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಾಮರಸ್ಯ ತರುವ ಕ್ರಿಯೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಶಿವಪುರ ಶಿಕ್ಷಣ ಸಮಿತಿ ಅಧ್ಯಕ್ಷೆ ಯಶೋಧರ ದೇವಿ ಘೋರ್ಪಡೆ ಮಾತನಾಡಿ, ಯೋಗ ಎಂದರೆ ಅದೊಂದು ಜೀವನ ಕ್ರಮ. ಯೋಗಾಭ್ಯಾಸ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿರಬೇಕು ಎಂದರು.
ಯೋಗ ಗುರು ಸಂಜೀವ ಸ್ವಾಮಿ, ಎಸ್‌ಆರ್‌ಎಸ್ ಶಾಲೆ ಪ್ರಾಚಾರ್ಯ ಅವಿನಾಶ್ ತ್ಯಾಗಿ ಮಾತನಾಡಿದರು. ವೈಷ್ಣವಿ ಬಹಿರ್ಜಿ ಘೋರ್ಪಡೆ, ಏಕಾಂಬರ್ ಅಜಯ್ ಘೋರ್ಪಡೆ, ಆಶಿಯಾ ಬಾನು, ಜಗದೀಶ ಬಸಾಪುರ ಇತರರಿದ್ದರು. ಎಸ್‌ಆರ್‌ಎಸ್, ಎಸ್‌ಜಿಆರ್‌ಎಸ್, ಸಂಡೂರು ಪಾಲಿಟೆಕ್ನಿಕ್, ಎಸ್‌ಇಎಸ್ ವಿದ್ಯಾಮಂದಿರ ಸೇರಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು.