

ಹುಬ್ಬಳ್ಳಿ: ನಗರದ ಸಿದ್ಧಾರೂಢ ಮಠದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಉಚಿತವಾಗಿ ನಿರಂತರ ಯೋಗ ತರಬೇತಿ ನೀಡುತ್ತಿರುವ ಹಿರಿಯ ಯೋಗ ಶಿಕ್ಷಕರಿಗೆ ಅಭಿನಂದನಾ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.
ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಅವರು, ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಶ್ರೀಸಿದ್ಧಾರೂಢ ಸ್ವಾಮೀಜಿಯವರು ಮಹಾ ಯೋಗಿಗಳಾಗಿದ್ದರು. ಅವರ ಸಾಧನಾ ಕ್ಷೇತ್ರದಲ್ಲಿ ಇಂದು ಯೋಗ ಸೇವೆಗಾಗಿ ನಾವೆಲ್ಲ ಸೇರಿದ್ದೇವೆ. ಇದು ನಮ್ಮೆಲ್ಲರ ಸೌಭಾಗ್ಯ. ಶ್ರೀ ಮಠದ ಯೋಗ ಕೇಂದ್ರ ಹಲವಾರು ದಶಕಗಳಿಂದ ಯಶಸ್ವಿಯಾಗಿ ಉಚಿತವಾಗಿ ನಡೆಯುತ್ತಿದೆ ಎಂದರು.
ಯೋಗಮಯ ಆರೋಗ್ಯಮಯ ಹುಬ್ಬಳ್ಳಿ - ಧಾರವಾಡ ಮಹಾನಗರವನ್ನಾಗಿಸುತ್ತಿರುವ 30ಕ್ಕೂ ಹೆಚ್ಚು ಹಿರಿಯ ಯೋಗ ಶಿಕ್ಷಕರಿಗೆ ಅಭಿನಂದನಾ ಪ್ರಮಾಣ ಪತ್ರ ನೀಡುತ್ತಿರುವುದು ಹೆಮ್ಮೆಯ ಕಾರ್ಯ. ಪ್ರತಿ ಮನೆಗೆ ಒಬ್ಬರು ಯೋಗ ಶಿಕ್ಷಕರಿದ್ದರೆ ಸಂಪೂರ್ಣ ಕುಟುಂಬ ಆರೋಗ್ಯವಾಗಿರುತ್ತದೆ. ಮನೆ ಆರೋಗ್ಯವಿದ್ದರೆ ಸಂರ್ಪೂಣ ಸಮಾಜ, ರಾಜ್ಯ, ದೇಶ, ವಿಶ್ವವೇ ಆರೋಗ್ಯಯುತವಾಗುತ್ತದೆ ಎಂದರು.
ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಗೌರವಾಧ್ಯಕ್ಷ ಸಿದ್ಧರಾಮಪ್ಪ ಕೋಳಕೂರು, ಹಿರಿಯ ಯೋಗ ಶಿಕ್ಷಕ ರಾಜಶೇಖರ ಕುದರಿ, ವಿಜಯಲಕ್ಷ್ಮಿ ಟೊಂಗಳಿ, ಭೀಮರಾವ್ ಪವಾರ, ಡಾ. ಈಶ್ವರ್ ಸೇಡಂಕರ್, ರಾಚಪ್ಪ ನನ್ನಾ, ಬಸವರಾಜ ಕೋರಿ, ಈರಮ್ಮ ಮರಗಾಲ್, ದುಂಡಪ್ಪ ಕೊರಕೊಪ್ಪ, ವಾಮನ ಶಾನುಭಾಗ, ಭರಮಪ್ಪನವರ, ಮಹೇಶ ಕೊಟ್ಟಿಗೇರ, ಮುತ್ತಪ್ಪ ನಲವಡಿ, ಭೀಮರಾವ್ ಪವಾರ್, ರವಿ, ನೀಲಪ್ಪ ಬಿಡನಾಳ ಮುಂತಾದವರು ಉಪಸ್ಥಿತರಿದ್ದರು.