ಖಿನ್ನತೆಯಿಂದ ಯೋಗ ಶಿಕ್ಷಕಿ ನೇಣಿಗೆ ಶರಣು

Yoga
Published on

ಮೈಸೂರು: ಗೋಕುಲಂನಲ್ಲಿ ಯೋಗ ಶಿಕ್ಷಕಿಯೊಬ್ಬರು ಒಂಟಿತನದ ಖಿನ್ನತೆಯಿಂದ ಶನಿವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೋಕುಲಂ ಮೂರನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿದ್ದ ಯೋಗ ಶಿಕ್ಷಕಿ ಮಲ್ಲಿಕಾ (47) ಆತ್ಮಹತ್ಯೆ ಮಾಡಿಕೊಂಡವರು. ಸೀರೆಯಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಲಿಕಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸೂರತ್ಕಲ್ ನಿವಾಸಿ. ಆರೇಳು ವರ್ಷಗಳ ಹಿಂದೆ ಹಿಂದೆ ಮಲ್ಲಿಕಾ ಅವರಿಗೆ ವಿಚ್ಛೇದನವಾಗಿತ್ತು. ಕಳೆದ ಮೂರು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿ ದ್ದರು. ಯೋಗ ಶಿಕ್ಷಕಿಯಾಗಿ ಜೀವನ ನಡೆಸುತ್ತಿದ್ದ ಅವರು ಕುಟುಂಬದವರು ಹಾಗೂ ಸಂಬಂಧಿಕರಿಂದ ದೂರ ಇದ್ದ ಕಾರಣದಿಂದ ಮಾನಸಿಕವಾಗಿ ನೋವು ಅನುಭವಿಸುತ್ತಿದ್ದರು.

ಮಲ್ಲಿಕಾ ಶನಿವಾರ ಬೆಳಗ್ಗೆ 9.30ರ ವೇಳೆಯಲ್ಲಿ ಕಸದ ಡಬ್ಬಿಯನ್ನು ಮನೆಯ ಹೊರಗೆ ಇಟ್ಟಿದ್ದನ್ನು ನೆರೆ ಹೊರೆಯವರು ಗಮನಿಸಿ ದ್ದಾರೆ. ಆದರೆ ಮಧ್ಯಾಹ್ನ 12ಕ್ಕೆ ನಿತ್ಯ ಯೋಗಾಭ್ಯಾಸಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳು ಸಾಕಷ್ಟು ಬಾರಿ ಬಾಗಿಲು ಬಡಿದರೂ ಬಾಗಿಲು ತೆರೆಯದೆ ಇದ್ದಾಗ ಅನುಮಾನಗೊಂಡ ವಿದ್ಯಾರ್ಥಿಗಳು ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಪೊಲೀಸರು ಬಂದು ನೋಡಿದಾಗ ಮಲ್ಲಿಕಾ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂತು. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net