ಯೋಗ-ಪ್ರಾಣಾಯಾಮದಿಂದ ಉತ್ತಮ ಮನುಜನಾಗಲು ಸಾಧ್ಯ

11adarshkdga3
Published on

ಮಡಿಕೇರಿ: ಯೋಗಾಸನ, ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ಉತ್ತಮ ಮನುಜನಾಗಲು ಸಾಧ್ಯವೆಂದು ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು.


ವಾಂಡರ್ಸ್‌ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಚಿತ ಮಕ್ಕಳ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದರು.


ಮನುಜ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು, ಆತ್ಮಶಕ್ತಿ ವೃದ್ಧಿಗೊಳ್ಳಲು ಮಾನಸಿಕ ಸಮತೋಲನ ಮುಖ್ಯ. ಮನಸು ಯಾರಿಗೂ ಕಾಣುವುದಿಲ್ಲ. ಮನಸಿನ ಬೀಗವನ್ನು ತೆರೆಯಲು ಯೋಗ, ಪ್ರಾಣಾಯಾಮದಿಂದ ಸಾಧ್ಯ. ಇದು ನಮ್ಮೊಳಗಿರುವ ೭೨ಸಾವಿರ ನರ ನಾಡಿಗಳನ್ನು ಶುದ್ಧ ಮಾಡುವುದಲ್ಲದೆ ಗಟ್ಟಿಗೊಳಿಸುತ್ತದೆ. ಯೋಗ ಮಾಡುವುದರಿಂದ ಏಕಾಗ್ರತೆ ಮೂಡುತ್ತದೆ. ಮನಸು ಕ್ರಿಯಾಶೀಲವಾಗಿ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ. ಉತ್ತಮ ಮಾನವನಾಗಲು ಸಹಕಾರಿಯಾಗುತ್ತದೆ. ಶಿಬಿರದಲ್ಲಿ ಕಲಿಸುವುದನ್ನು ನಿರಂತರವಾಗಿ ಅಭ್ಯಾಸ ಮಾಡಬೇಕೆಂದು ಕಿವಿಮಾತು ಹೇಳಿದರು.


ಗೋವಾ ಮೂಲದ ಸಮಾಜ ಸೇವಕಿ ರೂಬಿ ಮಾತನಾಡಿ, ಜೀವನದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡಿದಲ್ಲಿ ನಮಗೆ ಅದಕ್ಕಿಂತ ದುಪ್ಪಟ್ಟು ಸಹಕಾರವಾಗಲಿದೆ. ಮತ್ತೊಬ್ಬರ ಕಷ್ಟಕ್ಕೆ ನೆರವಾಗಬೇಕು. ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವೆಂದು ತಿಳಿಸಿದರು.


ಈ ಸಂದರ್ಭದಲ್ಲಿ ಕಳೆದ ೨೯ ವರ್ಷಗಳಿಂದ ಶಿಬಿರ ಆಯೋಜನೆ ಮಾಡಿಕೊಂಡು ಬರುತ್ತಿರುವ ಶಿಬಿರದ ಸಂಚಾಲಕ ಬಾಬು ಸೊಮಯ್ಯರವರನ್ನು ಅನಂತಶಯನರವರು ಶಿಬಿರದ ಮಕ್ಕಳೊಂದಿಗೆ ಸನ್ಮಾನಿಸಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net