5 ಕೋಟಿ ಜನರಿಂದ ಯೋಗಾಭ್ಯಾಸ

udp-24-yoga 1
Published on

ಉಡುಪಿ: ಪತಂಜಲಿ ಯೋಗ ಪೀಠದ ಮೂಲಕ ನಿತ್ಯ ದೇಶ ಮತ್ತು ಹೊರದೇಶಗಳಲ್ಲಿ 5 ಕೋಟಿ ಜನ ಯೋಗಾಭ್ಯಾಸ ಪ್ರಾಣಾಯಾಮ ನಡೆಸುತ್ತಿದ್ದಾರೆ. ಆಧುನಿಕ ಜಗತ್ತಿನಲ್ಲಿ ಮನುಷ್ಯನ ಆರೋಗ್ಯ ಮೇಲಾಗುತ್ತಿರುವ ದುಷ್ಪರಿಣಾಮಗಳಿಗೆ ಭಾರತೀಯ ಯೋಗ ಒಂದೇ ಪರಿಹಾರ ಎಂಬುದು ಜಗತ್ತಿಗೆ ಅರ್ಥವಾಗುತ್ತಿದೆ ಎಂದು ಯೋಗಗುರು ಬಾಬಾ ರಾಮ್​ ದೇವ್​ ಹೇಳಿದರು.

ರಾಜಾಂಗಣದಲ್ಲಿ ಪುತ್ತಿಗೆ ಮಠದ ಆಶ್ರಯದಲ್ಲಿ ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನ ಅಂಗವಾಗಿ ಮೂರು ದಿನ ನಡೆಯುವ ಯೋಗ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜೀವನ ಕ್ರಮಗಳಿಂದ ಶರೀರದಲ್ಲಿ ವ್ಯಯವಾಗುತ್ತಿರುವ ಧನಾತ್ಮಕ ಶಕ್ತಿಗಳನ್ನು ಪುನರುಜ್ಜೀವನಗೊಳಿಸಲು ಆಧುನಿಕ ವೈದ್ಯ ಶಾಸ್ತ್ರದಲ್ಲಿ ಉಪಾಯಗಳಿಲ್ಲ. ಕೇವಲ ರಾಸಾಯನಿಕ ಔಷಧಿಗಳನ್ನು ನೀಡುತ್ತಾರೆ. ಅದರಿಂದ ಮತ್ತಷ್ಟು ಋಣಾತ್ಮಕ ಪರಿಣಾಮಗಳಾಗುತ್ತಿವೆ. ಆದರೆ ಯೋಗದಿಂದ ಮಾತ್ರ ಶರೀರದಲ್ಲಿ ವ್ಯಯವಾದ ಶಕ್ತಿಯನ್ನು ಮತ್ತೆ ಉತ್ಪಾದಿಸಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿನಿತ್ಯ ಕನಿಷ್ಠ ಅರ್ಧ ಘಂಟೆ ಯೋಗ ಪ್ರಾಣಾಯಾಮ ಮಾಡಬೇಕು ಎಂದು ವ್ಯಾಖ್ಯಾನಿಸಿದರು.

ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಯೋಗಸೂತ್ರಗಳನ್ನು ಅರ್ಜುನನಂತೆ ಬಾಬಾ ರಾಮ್​ ದೇವ್​ ಜೀ ಯವರು ವಿಶ್ವವ್ಯಾಪಕ ಗೊಳಿಸಿ ಜನರನ್ನು ಧರ್ಮಮಾರ್ಗದಲ್ಲಿ ಕರ್ತವ್ಯ ಭ್ರಷ್ಟರಾಗದಂತೆ ಜಾಗೃತಗೊಳಿಸುತ್ತಿದ್ದಾರೆ. ಗೀತೆಯನ್ನು ಬಿಟ್ಟು ಯೋಗ ಇಲ್ಲ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಎರಡಕ್ಕೂ ಕೃಷ್ಣ ಗೀತೆಯಲ್ಲಿ ಪರಿಹಾರ ಸೂತ್ರಗಳನ್ನು ತಿಳಿಸಿದ್ದಾನೆ. ಈ ಕಾರ್ಯಕ್ರಮ ಗೀತಾ ಯೋಗ ಸಂಗಮ ಎಂದು ಬಣ್ಣಿಸಿದರು.

ಪೀಠದ ಯೋಗಾಧಿಕಾರಿ ಸ್ವಾಮೀ ಪರಮಾರ್ಥ ಜೀ , ರಾಜ್ಯ ಪ್ರಭಾರಿ ಭವರ್​ ಲಾಲ್​ ಆರ್ಯ , ಮಠದ ದಿವಾನರಾದ ನಾಗರಾಜಾಚಾರ್ಯ, ಪ್ರಸನ್ನಾಚಾರ್ಯ, ಜಿಲ್ಲಾ ಪ್ರಭಾರಿ ವೆಂಕಟೇಶ ಮೆಹಂದಳೆ , ರಾಘವೇಂದ್ರ ಭಟ್​ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net