

ಹುಬ್ಬಳ್ಳಿ: ಇಂದಿನ ಶೈಕ್ಷಣಿಕ ಯುಗದಲ್ಲಿ ತಾಂತ್ರಿಕ ಬಳಕೆ ಕಡ್ಡಾಯವಾಗಿದೆ. ಒತ್ತಡ ನಿವಾರಣೆಗೆ ಯೋಗ ಮದ್ದಾಗಿ ಪರಿಣಮಿಸಿದೆ ಎಂದು ಐಬಿಎಂಆರ್ ಕಾಲೇಜ್ ಚೇರ್ಮನ್ ವಿನಯಚಂದ್ರ ಮಹೇಂದ್ರಕರ ಹೇಳಿದರು.
ಕನ್ನಡ ನಂ.1 ದಿನಪತ್ರಿಕೆ ‘ವಿಜಯವಾಣಿ’, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಯೋಗ ಸ್ಪರ್ಶ ಪ್ರತಿಷ್ಠಾನ ವತಿಯಿಂದ ಇಲ್ಲಿಯ ಕೊಪ್ಪಿಕರ ರಸ್ತೆಯ ಸೆಟಲೈಟ್ ಬಿಲ್ಡಿಂಗ್‌ನ ಮೇಲ್ಮಹಡಿಯಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಈಗ ಮನೆ ಮನೆಗೆ ತಲುಪಿದೆ. ಜನರಿಗೆ ಯೋಗದ ಕುರಿತು ಮನವರಿಕೆಯಾಗುತ್ತಿದೆ. ಆದರೆ, ಶಿಕ್ಷಣ ಕ್ಷೇತ್ರದಲ್ಲೂ ಯೋಗ ಇಂದಿನ ದಿನಗಳಲ್ಲಿ ಅತ್ಯಗತ್ಯ. ದಿನದಲ್ಲಿ 6 ಗಂಟೆ ಮೊಬೈಲ್ ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್ ಸೇರಿ ಇತರ ಯಂತ್ರೋಪಕರಣಗಳನ್ನು ಬಳಕೆ ಮಾಡಲಾಗುತ್ತಿದೆ. ಸಹಜವಾಗಿ ಇದು ಒತ್ತಡ ತಂದಿಡುತ್ತಿದೆ. ಹಾಗಾಗಿ ಯೋಗ ಅತ್ಯಗತ್ಯ ಎಂದರು.
ಆಲೋಚನಾ ಶಕ್ತಿ ಕುಂದುತ್ತಿದೆ. ಸಂಶೋಧನೆ ಮತ್ತು ಉದ್ಯಮ ಒಟ್ಟೊಟ್ಟಿಗೆ ಸಾಗುವ ವೇಳೆ ಒತ್ತಡ ಆಗಮಿಸಿದರೆ ಬದುಕು ದುಸ್ತರ. ಸುಂದರ ಬದುಕು, ಒತ್ತಡ ಮುಕ್ತ ಜೀವನಕ್ಕೆ ಯೋಗ ಮದ್ದಾಗಿದೆ ಎಂದರು.
ಆರ್ಟವಾಲೆ ಚೇರ್ಮನ್ ಗೌತಮ್ ಓಸ್ತ್ವಾಲ್ ಮಾತನಾಡಿ, ನಾನು ಕಂಡಂತೆ ಸಮಯಕ್ಕೆ ಬೆಲೆ ಕೊಡುವವಲ್ಲಿ ಮೊದಲಿಗರು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ. ಈದಿನ ನಾನು ನೋಡಿದ್ದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ. ಯಾರು ಸಮಯಕ್ಕೆ ಬೆಲೆ ಕೊಡುತ್ತಾರೋ ಅವರು ಜೀವನದಲ್ಲಿ ಯಶಸ್ಸು ಗಳಿಸುವುದು ದಿಟ ಎಂದರು.
ನಿತ್ಯವೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಜೀವನ ಮತ್ತು ಆರೋಗ್ಯ ಒಟ್ಟೊಟ್ಟಿಗೆ ಸುಂದರವಾಗಿರುತ್ತದೆ. ಯೋಗಕ್ಕೆ ಪರ್ಯಾಯವಾದ ಔಷಧ ಇಲ್ಲ. ಎಲ್ಲ ರೋಗಕ್ಕೆ ಯೋಗ ದಿವ್ಯ ಔಷಧ ಎಂದರು.
ಉದ್ಯಮಿ ಪ್ರಸನ್ನ ದೀಕ್ಷಿತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಖೆಯನ್ನು ಮೊದಲು ಹುಬ್ಬಳ್ಳಿಯಲ್ಲಿ ಆರಂಭಿಸಿದಾಗ ಅಷ್ಟೊಂದು ಜನರು ಸೇರುತ್ತಿರಲಿಲ್ಲ. ಈಗ ಯೋಗದ ಶಾಖೆಗಳು ಜಿಲ್ಲಾದ್ಯಂತ ಇವೆ. ಯೋಗ ಕೇಂದ್ರದ ಸ್ವಂತ ಕಚೇರಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಶೀಘ್ರವೇ ಕಾರ್ಯಾರಂಭ ಮಾಡಲಾಗುವುದು ಎಂದರು.
ಯೋಗ ಸ್ಪರ್ಶ ಪ್ರತಿಷ್ಠಾನದ ಮುಖ್ಯಸ್ಥ ದಯಾನಂದ ಮಗಜಿಕೊಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್‌ಪಿವೈಎಸ್‌ಎಸ್ ಹುಬ್ಬಳ್ಳಿ ಕಚೇರಿ ಸ್ಥಾಪಿಸಲು 2 ಎಕರೆ ಜಾಗ ನೋಡಲು ತೀರ್ಮಾನಿಸಲಾಯಿತು. ದೂರ ಆಗುವುದರಿಂದ ಸಮಸ್ಯೆ ಆಗಲಿದೆ ಎಂದರಿತು ಸೆಟಲೈಟ್ ಬಿಲ್ಡಿಂಗ್‌ನಲ್ಲಿ ಜಾಗ ಗುರುತಿಸಲಾಗಿದೆ. ಇಲ್ಲಿಯ ಯೋಗ ಶಿಕ್ಷಣದ ಜತೆಗೆ ಥೆರಪಿ, ಕಾರ್ಯಾಗಾರ ನಡೆಸಲಾಗುವುದು ಎಂದರು.
ಕಾರ್ಯಕ್ರಮ ಸಂಚಾಲಕರಾದ ಬೀರೇಶ ತಳ್ಳಿಕೇರಿ, ವಿಜಯಾ ವಿಠ್ಠಲಕರ ಇತರರು ಇದ್ದರು.
ಇದಕ್ಕೂ ಮೊದಲು ಯೋಗಾಸಕ್ತರು ವಿವಿಧ ಯೋಗಾಸನಗಳನ್ನು ಮಾಡಿದರು.