ಮಾನಸಿಕ ಆರೋಗ್ಯಕ್ಕೆ ಯೋಗ ಮದ್ದು

4blrp1
Published on

 ಬೇಲೂರು: ಭಾರತೀಯ ಪರಂಪರೆಯಲ್ಲಿ ಯೋಗವು ತನ್ನದೇ ಆದ ಮಹತ್ವ ಹೊಂದಿದ್ದು, ಯೋಗ ಶರೀರವನ್ನು ಸದೃಢಗೊಳಿಸುವುದರ ಜತೆಗೆ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಪೂರಕವಾಗಿದೆ ಎಂದು ಯೋಗ ಗುರು ಅಡಗೂರು ಚೇತನ್ ಗುರೂಜಿ ಹೇಳಿದರು.

ಹಾಸನ ರಕ್ತನಿಧಿ, ರಾಜೀವ್ ಆಯುರ್ವೇದ ಆಸ್ಪತ್ರೆ, ಯೋಗ ಚೇತನ ಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ಧರ್ಮಸ್ಥಳ ಗ್ರಾಮೀಣ ಸಂಘ, ಪುಷ್ಪಗಿರಿ ಮಹಿಳಾ ಸಂಘ, ಹೆಬ್ಬಾಳು ಗ್ರಾಮಾಭಿವೃದ್ಧಿ ಸಂಘ, ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಂಘದ ಸಹಯೋಗದೊಂದಿಗೆ ಶನಿವಾರ ಹೆಬ್ಬಾಳು ಗ್ರಾಮದಲ್ಲಿ ಬಸವೇಶ್ವರ ಜಯಂತಿ ಹಾಗೂ ಪಹಲ್ಗಾಮ್‌ನಲ್ಲಿ ಮಡಿದವರ ಸ್ಮರಣಾರ್ಥ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಯೋಗವು ಇಂದು ವಿಶ್ವದಾದ್ಯಂತ ಹೆಚ್ಚು ಪ್ರಚಲಿತದಲ್ಲಿದೆ. ಯೋಗವು ಪ್ರತಿಯೊಬ್ಬರ ಮಾನಸಿಕ ಹಾಗೂ ದೈಹಿಕವಾಗಿ ಶರೀರದ ಸದೃಢಗೊಳಿಸುವುದಲ್ಲದೆ, ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ದಿನನಿತ್ಯ ಯೋಗ ಮಾಡಲು ಮುಂದಾಗಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಕಾರಣ ದೇಹದಲ್ಲಿ ಹಲವಾರು ಕಾಯಿಲೆಗಳ ಉಲ್ಬಣಕ್ಕೆ ಕಾರಣವಾಗುತ್ತಿದೆ. ಮತ್ತು ನಾಯಿ ಕೊಡೆಗಳಂತೆ ಆಸ್ಪತ್ರೆಗಳು ತಲೆ ಎತ್ತುತ್ತಿವೆ. ಇಂತಹ ಕಾಯಿಲೆಗಳಿಂದ ತಪ್ಪಿಸಿಕೊಳ್ಳಲು ಯೋಗ ಉತ್ತಮ ಔಷಧವಾಗಿದ್ದು, ಎಲ್ಲರೂ ಯೋಗದತ್ತ ಮುಖ ಮಾಡಬೇಕಿದೆ ಎಂದರು.

ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಹಾಲಪ್ಪ ಮಾತನಾಡಿ, ಧರ್ಮಸ್ಥಳ ಸಂಘದಿಂದ ಏಳು ದಿನಗಳ ಕಾಲ ನಡೆದ ಯೋಗ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ 15 ದಿನಗಳಿದ ಶಿಬಿರದಲ್ಲಿ ಯೋಗದಿಂದಾಗುವ ಅನುಕೂಲ ಮತ್ತು ಆರೋಗ್ಯದ ಸಮಸ್ಯೆಗಳ ಬಗ್ಗೆ ಅಡಗೂರು ಚೇತನ್ ಗುರೂಜಿ ಉತ್ತಮ ಮಾಹಿತಿ ನೀಡಿದ್ದಾರೆ. ಹಣ ಅಧಿಕಾರಕ್ಕಿಂತ ಆರೋಗ್ಯದ ಬಗ್ಗೆ ಜನರು ಹೆಚ್ಚು ಅಸಕ್ತಿ ವಹಿಸಬೇಕು ಎಂದರು.

ಗುತ್ತಿಗೆದಾರ ಶಿವಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಯೋಗೀಶ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ರತಿದೇವಿ, ರಾಜೀವ್ ಆಸ್ಪತ್ರೆಯ ಡಾ.ನಿತೀನ್, ಡಾ,ದೀಪಶ್ರೀ, ಡಾ.ಗೋವರ್ಧನ್, ಡಾ.ಶಾಲಿನಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net